ನವದೆಹಲಿ, ಮಾ 23 (DaijiworldNews/DB): ರಾಹುಲ್ ಗಾಂಧಿಯವರ ಧ್ವನಿ ಹತ್ತಿಕ್ಕಲು ಇಡೀ ಸರ್ಕಾರಿ ಯಂತ್ರಗಳು ಪ್ರಯತ್ನಿಸುತ್ತಿವೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ ಬಗ್ಗೆ ನೀಡಿದ ಹೇಳಿಕೆಗೆ ಸಂಬಂಧಿಸಿ ದಾಖಲಾಗಿರುವ 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಗುಜರಾತ್ನ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಆತಂಕಕ್ಕೊಳಗಾಗಿದೆ. ಅದಕ್ಕಾಗಿಯೇ ಸರ್ಕಾರಿ ಯಂತ್ರವನ್ನಿಡೀ ರಾಹುಲ್ ಧ್ವನಿ ಉಡುಗಿಸಲು ಬಳಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ನನ್ನ ಸಹೋದರ ಎಂದಿಗೂ ಸತ್ಯವನ್ನೇ ಹೇಳುತ್ತಾರೆ. ಅವರೆಂದು ಹೆದರಿಲ್ಲ, ಮುಂದೆ ಹೆದರುವುದೂ ಇಲ್ಲ. ದೇಶದ ಜನತೆಯ ಪರ ಧ್ವನಿ ಎತ್ತುವ ಕೆಲಸವನ್ನು ಅವರು ನಿಷ್ಠೆಯಿಂದ ಮಾಡುತ್ತಾರೆ. ಅವರ ಮೇಲೆ ಕೋಟಿ ಭಾರತೀಯರ ಪ್ರೀತಿ, ಆಶೀರ್ವಾದ ಇದೆ ಎಂದರು.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್, ಬಿಜೆಪಿಯೇತರ ಪಕ್ಷಗಳ ನಾಯಕರ ವಿರುದ್ದ ಪ್ರಕರಣ ದಾಖಲಿಸುವ ಷಡ್ಯಂತ್ರ ಇಂದು ನಿನ್ನೆಯದಲ್ಲ. ವಿಪಕ್ಷಗಳನ್ನು ಮುಗಿಸುವ ಪ್ರಯತ್ನ ನಡೆಯುತ್ತಲೇ ಇದೆ ಎಂದರು.
ಕಾನೂನು ಪ್ರಕಾರ ಇದರ ವಿರುದ್ದ ಹೋರಾಡುತ್ತೇವೆ ಎಮದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.