ಚೆನ್ನೈ, ಮಾ 23 (DaijiworldNews/DB): ತಮ್ಮ ಪುತ್ರಿಗೆ ಶಿಕ್ಷಕ ಹೊಡೆದರೆಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳ ಹೆತ್ತವರು ಶಿಕ್ಷಕನನ್ನು ಅಟ್ಟಾಡಿಸಿ ಹೊಡೆದ ಘಟನೆ ತಮಿಳುನಾಡಿನ ಟುಟಿಕೋರಿನ್ನಲ್ಲಿ ನಡೆದಿದೆ.
ಶಿಕ್ಷಕ ಆರ್. ಭರತ್ ಥಳಿತಕ್ಕೊಳಗಾದವರು. ಪ್ರಕರಣ ಸಂಬಂಧ ಪೊಲೀಸರು ಬಾಲಕಿ ಹೆತ್ತವರಾದ ಶಿವಲಿಂಗಂ, ಸೆಲ್ವಿ, ಅಜ್ಜ ಮುನುಸಾಮಿಯನ್ನು ಬಂಧಿಸಿದ್ದಾರೆ.
2ನೇ ತರಗತಿಯ 7 ವರ್ಷದ ವಿದ್ಯಾರ್ಥಿನಿಯನ್ನು ಪಾಠ ಸರಿಯಾಗಿ ಆಲಿಸದ ಕಾರಣಕ್ಕಾಗಿ ಜಾಗ ಬದಲಾಯಿಸಿ ಬೇರೆಡೆ ಕುಳಿತುಕೊಳ್ಳಲು ಹೇಳಿದ್ದೆ. ಜಾಗ ಬದಲಾವಣೆ ಮಾಡುವ ವೇಳೆ ಆಕೆಗೆ ಬೆಂಚ್ ತಾಗಿದ್ದು, ಕೆಳಕ್ಕೆ ಬಿದ್ದಿದ್ದಾಳೆ. ಆದರೆ ವಿದ್ಯಾರ್ಥಿನಿ ಮನೆಗೆ ತೆರಳಿ ತನಗೆ ಶಿಕ್ಷಕ ಹೊಡೆದಿದ್ದಾರೆ ಎಂದು ದೂರು ಹೇಳಿದ್ದಾಳೆ. ವಿದ್ಯಾರ್ಥಿನಿ ಮಾತನ್ನು ನಂಬಿದ ಆಕೆಯ ತಂದೆ, ತಾಯಿ ಮತ್ತು ಅಜ್ಜ ಶಾಲೆಗೆ ಹೋಗಿ ಶಿಕ್ಷಕ ಭರತ್ ಅವರೊಂದಿಗೆ ವಾಗ್ವಾದ ಮಾಡಿದ್ದು, ಶಿಕ್ಷಕನನ್ನು ಹೊರಗೆಳೆದು ಅವರನ್ನು ಅಟ್ಟಾಡಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಇನ್ನು ಮಕ್ಕಳನ್ನು ಹೊಡೆಯುವುದು ಕಾನೂನುಬಾಹಿರವಾಗಿದ್ದು, ನಿನಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ವಿದ್ಯಾರ್ಥಿನಿಯ ತಾಯಿ ಗದರಿದ್ದಾಳೆ. ವಿದ್ಯಾರ್ಥಿನಿ ಕೂಡಾ ಶಿಕ್ಷಕನಿಗೆ ಕಲ್ಲು ಎಸೆಯಲು ಯತ್ನಿಸಿದ್ದಾಳೆಂದು ತಿಳಿದು ಬಂದಿದೆ.