ಬೆಂಗಳೂರು, ಮಾ 24 (DaijiworldNews/DB): ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಎಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ಕಾಂಗ್ರೆಸ್ನಂತೆಯೇ ಟಿಕೆಟ್ ಹಂಚಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ರಾಜ್ಯ ನಾಯಕರ ಕೋರ್ ಕಮಿಟಿ ಸಭೆ ಈವರೆಗೆ ನಡೆದಿಲ್ಲ. ಹೈಕಮಾಂಡ್ನಲ್ಲಿಯೇ ಪರಿಶೀಲನೆಗಳು ನಡೆಯುತ್ತಿವೆ ಎನ್ನಲಾಗಿದೆ. ಟಿಕೆಟ್ ಹಂಚಿಕೆ ವಿಚಾರವಾಗಿ ಈವರೆಗೆ ಬಿಜೆಪಿಯಲ್ಲಿ ಕೇವಲ ಒಂದು ಸಭೆ ನಡೆದಿದೆ. ಆದರೆ ಸೋಲುವ ಭೀತಿ ಇಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಎಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರಲ್ಲಿಯೂ ಕೆಲವು ಹಾಲು ಶಾಸಕರಿಗೆ ಟಿಕೆಟ್ ಸಿಗದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಬಿಜೆಪಿಯಲ್ಲಿ ಸುಮಾರು . 25ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಮತ್ತು ಅವರೆಲ್ಲರೂ ಪ್ರಬಲ ಆಕಾಂಕ್ಷಿಗಳಾಗಿರುವುದರಿಂದ ಅವರನ್ನು ಮನವೊಲಿಸಿಕೊಂಡು ಒಬ್ಬರಿಗೆ ಟಿಕೆಟ್ ನೀಡುವುದು ಬಿಜೆಪಿಗೆ ಸವಾಲಾಗಲಿದೆ. ಈ ಆಕಾಂಕ್ಷಿಗಳಲ್ಲಿ ಬಿಎಸ್ವೈ ಮತ್ತು ಬಿ.ಎಲ್. ಸಂತೋಷ್ ಬೆಂಬಲಿಗರಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಮಧ್ಯರಾತ್ರಿ ಬಳಿಕವೇ ಬಿಜೆಪಿ ಪಟ್ಟಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ನಾಲ್ಕು ಹಂತಗಳಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿತ್ತು.
ಇನ್ನು ಯುಗಾದಿಯಂದು ಬಿಡುಗಡೆಗೊಳ್ಳಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯ ಬಿಡುಗಡೆ ಮುಂದೂಡಲ್ಪಟ್ಟಿದೆ. ಮುಂದೆ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.