ಸರ್ಗುಜಾ (ಛತ್ತೀಸ್ಗಢ), ಮಾ 24 (DaijiworldNews/DB): ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪುತ್ರ, ಐದು ವರ್ಷದ ಬಾಲಕನನ್ನು ಮಕ್ಕಳ ಕಾನ್ಸ್ಟೇಬಲ್ ಹುದ್ದೆಗೆ ನೇಮಿಸಲಾಗಿದೆ. ಅನುಕಂಪದ ಆಧಾರದಲ್ಲಿ ಮಗುವಿಗೆ ಈ ಹುದ್ದೆ ಲಭಿಸಿದೆ.
ಯುಕೆಜಿ ವಿದ್ಯಾರ್ಥಿಯಾಗಿರುವ ನಮನ್ ರಾಜ್ವಾಡೆ ಅವರೇ ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಬಾಲಕ ಛತ್ತೀಸ್ಗಢದ ಸರ್ಗುಜಾದಲ್ಲಿ ಅವರು ಈ ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದ ಬಾಲಕನ ತಂದೆ ರಾಜ್ಕುಮಾರ್ ರಾಜವಾಡೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಬೆನ್ನಲ್ಲೇ ಆಡಳಿತ ಮಂಡಳಿಯು ರಾಜ್ಕುಮಾರ್ ಅವರ ಪುತ್ರ, ಐದರ ಬಾಲಕನನ್ನು ಅನುಕಂಪದ ಆಧಾರದ ಮೇಲೆ ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕ ಮಾಡಿದೆ.
ಇನ್ನು ಮಗನಿಗೆ ಸಿಕ್ಕಿದ ಹೊಸ ಹುದ್ದೆಯ ಬಗ್ಗೆ ಮಾತನಾಡಿದ ನಮನ್ ತಾಯಿ ನಿತು ರಾಜ್ವಾಡೆ, ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ದಿಕ್ಕೇ ತೋಚದಂತಾಗಿತ್ತು. ಈಗ ಮಗನನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕ ಮಾಡಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ ಎಂದಿದ್ದಾರೆ.
ಇನ್ನು ಈ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಭಾವನಾ ಗುಪ್ತಾ, ಆಡಳಿತ ಹಾಗೂ ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಯನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಯಾಗಿರುವವರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದರೆ ಅವರನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಮಿಸಲಾಗುತ್ತದೆ. ಇದೇ ಮಾದರಿಯಲ್ಲಿ ನಮನ್ನ ನೇಮಕಾತಿ ನಡೆದಿದೆ ಎಂದಿರುವುದಾಗಿ ವರದಿಯಾಗಿದೆ.