ಬೆಂಗಳೂರು, ಮಾ 24 (DaijiworldNews/DB): ರಾಜ್ಯದಲ್ಲಿ ಅತಂತ್ರ ಸ್ಥಿತಿಗೆ ಜನ ಅವಕಾಶ ನೀಡಬಾರದು. ಬಿಜೆಪಿ ಪೂರ್ಣಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಜನ ಕೈಜೋಡಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಗರದ ಕೊಮ್ಮಘಟ್ಟದಲ್ಲಿ ಶುಕ್ರವಾರ ಸಹಕಾರ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿಗೆ ಶಕ್ತಿ ತುಂಬಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅತಂತ್ರ ಸ್ಥಿತಿ ನಿರ್ಮಾಣವಾಗಬಾರದು. ಬಿಜೆಪಿಗೆ ಪೂರ್ಣ ಬಹುಮತ ನೀಡಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು. ಮತ್ತೊಮ್ಮೆ ಇಲ್ಲಿ ಬಿಜೆಪಿ ಸರ್ಕಾರ ಬರಲು ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.
ಸದೃಢ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯದ ಏಳಿಗೆಗೆ ಉತ್ತಮ. ಅದಕ್ಕೆ ಪೂರ್ಣಬಹುಮತ ತೀರಾ ಅಗತ್ಯ ಎಂದವರು ಪ್ರತಿಪಾದಿಸಿದರು.