ಬಳ್ಳಾರಿ, ಮಾ 24 (DaijiworldNews/DB): ಬಳ್ಳಾರಿ ನಗರ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಎಂ. ದಿವಾಕರ ಬಾಬು ಆಹ್ವಾನಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರೆಡ್ಡಿ ಬ್ರದರ್ಸ್ ವಿರುದ್ದ ತೊಡೆತಟ್ಟಿದ್ದ ಸಿದ್ದರಾಮಯ್ಯ ಭ್ರಷ್ಟಾಚಾರ ಹಾಗೂ ದರ್ಪದ ರಾಜಕಾರಣದ ವಿರುದ್ದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆನಂತರ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ದಿಗೆ ಕಾರಣಕರ್ತರಾದರು. ಈ ಬಾರಿಯ ಚುನಾವಣೆಯಲ್ಲಿ ಅವರು ಬಳ್ಳಾರಿ ನಗರದಿಂದ ಕಣಕ್ಕಿಳಿಯಲಿ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ. ಇರುವ ಕಟ್ಟಡ, ಟವರ್ಗಳನ್ನು ಒಡೆದು ಹಾಕಿ ಹೊಸತು ಕಟ್ಟುವುದಷ್ಟೇ ಅವರ ಕೆಲಸವಾಗಿದೆ. ಸಿದ್ದರಾಮಯ್ಯ ಅವರು ಇಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರಷ್ಟೇ ಬಳ್ಳಾರಿ ಅಭಿವೃದ್ದಿಯನ್ನು ನಾವು ನೋಡಬಹುದು ಎಂದವರು ಪ್ರತಿಪಾದಿಸಿದರು.
ಈ ಹಿಂದೆ ಸೋನಿಯಾ ಗಾಂಧಿಯವರು ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಆ ಮೂಲಕ ಜಿಲ್ಲೆಯನ್ನು ಅಭಿವೃದ್ದಿಪಡಿಸಿದರು. ಸಿದ್ದರಾಮಯ್ಯ ಇಲ್ಲಿ ನಿಂತರ ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದರು.
ಇನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ದದ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಆ ವಿಚಾರವಾಗಿ ನಾಣು ಮಾತನಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.