ನವದೆಹಲಿ, ಮಾ 24 (DaijiworldNews/DB): ಕಳ್ಳ ಎಂದು ಕರೆಯುವುದೂ ನಮ್ಮ ದೇಶದಲ್ಲಿ ಅಪರಾಧವಾಗಿದೆ. ಇದು ಸರ್ವಾಧಿಕಾರದ ಅಂತ್ಯದ ಆರಂಭ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕಿಡಿ ಕಾರಿದ್ದಾರೆ.
ಲೋಕಸಭೆಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರಿಗೆ ಶಿಕ್ಷಕೆಯಾಗುತ್ತಿದೆ. ಆದರೆ ಲೂಟಿಕೋರರು ಮುಕ್ತವಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಕೊಲೆ ಎಂದು ಹರಿಹಾಯ್ದರು.
ಸರ್ಕಾರಿ ವ್ಯವಸ್ಥೆಗಳು ಈ ದೇಶದಲ್ಲಿ ತೀರಾ ಒತ್ತಡದಲ್ಲಿವೆ. ಸರ್ವಾಧಿಕಾರದ ವಿರುದ್ದ ಹೋರಾಟ ಅಗತ್ಯ. ಅದಕ್ಕೆ ನಿರ್ದೇಶನ ಬಾಕಿಯುಳಿದಿದೆ. ಸರ್ವಾಧಿಕಾರದ ಅಂತ್ಯದ ಆರಂಭ ಇದಾಗಿದೆ ಎಂದರು.
'ಮೋದಿ ಉಪನಾಮ' ಕುರಿತ ಟೀಕೆ ವಿಚಾರವಾಗಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಯವರು ದೋಷಿ ಎಂಬುದಾಗಿ ಸೂರತ್ ಕೋರ್ಟ್ ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಇಂದು ರಾಹುಲ್ ಗಾಂಧಿಯವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ಇನ್ನು ಈ ಪ್ರಕರಣದಲ್ಲಿ ಕಾನೂನು ಹಾಗೂ ರಾಜಕೀಯವಾಗಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.