ಬೆಳಗಾವಿ, ಮಾ 25 (DaijiworldNews/DB): ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಬೆಳಗಾವಿ ಜಿಲ್ಲೆಯ ಹಿಂಡಲಗಾ ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾರ್ಚ್ 21ರ ಮಂಗಳವಾರದಂದು ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿದಾತ ಹಿಂಡಲಗಾ ಜೈಲಿನಲ್ಲಿ ಕೈದಿಯಾಗಿರುವ ಜಯೇಶ್ ಪೂಜಾರಿ ಎನ್ನಲಾಗಿದೆ. ಹೀಗಾಗಿ ಹಿಂಡಲಗಾ ಜೈಲಿಗೆ ಮಹಾರಾಷ್ಟ್ರ ಪೊಲೀಸರು ಆಗಮಿಸಿ ಪರಿಶೀಲಿಸಿದರು. ನಾಗಾಪುರ ಪೊಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರ ಪೊಲೀಸರು ತಪಾಸಣೆ ನಡೆಸಿದ್ದು, ಈ ವೇಳೆ ಎರಡು ಮೊಬೈಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್ ಪತ್ತೆಯಾಗಿವೆ. ನಾಗಾಪುರ ಪೊಲೀಸರು ಮೊಬೈಲ್ ವಶಕ್ಕೆ ಪಡೆದಿದ್ದು, ಗಡ್ಕರಿ ಕಚೇರಿ ಹಾಗೂ ಮನೆಗೆ ಭದ್ರತೆ ಹೆಚ್ಚಿಸಿದ್ದಾರೆ. ಜಯೇಶ್ನನ್ನು ವಿಚಾರಣೆ ನಡೆಸಲು ಕಸ್ಟಡಿಗೆ ನೀಡುವಂತೆ ಕೋರುತ್ತೇವೆ ಎಂದು ನಾಗ್ಪುರ ಪೊಲೀಸ್ ಅಧಿಕಾರಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
2008ರಲ್ಲಿ ಡಕಾಯಿತಿ ವೇಳೆ ನಡೆದ ಕೊಲೆ ಪ್ರಕರಣದಲ್ಲಿ ಜಯೇಶ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ. ಬಳಿಕ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು.