ನವದೆಹಲಿ, ಮಾ 25 (DaijiworldNews/HR): ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅನರ್ಹರಾದ ಬೆನ್ನಲ್ಲೇ ಇದೀಗ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು 2018ರಲ್ಲಿ ಮಾಡಿದ್ದ ಟ್ವೀಟ್ವೊಂದು ವೈರಲ್ ಆಗುತ್ತಿದೆ.
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್, ನೀರವ್ ಮೋದಿಯಾಗಿರಲಿ, ಲಲಿತ್ ಮೋದಿಯಾಗಿರಲಿ ಅಥವಾ ನರೇಂದ್ರ ಮೋದಿಯಾಗಿರಲಿ, ಎಲ್ಲ ಕಳ್ಳರ ಸರ್ ನೇಮ್ ಕೂಡ ಮೋದಿಯೇ ಆಗಿರುವುದೇಕೆ?ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್ನ ಮಾಜಿ ಸಚಿವ, ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬವರು ರಾಹುಲ್ ವಿರುದ್ಧ ಮಾನಹಾನಿ ಕೇಸು ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಮಾನನಷ್ಟ ಮೊಕದ್ದಮೆ ಕೇಸ್ನಲ್ಲಿ ರಾಹುಲ್ ದೋಷಿ ಎಂದು ಪರಿಗಣಿತರಾಗಿ, 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಇನ್ನು ಖುಷ್ಬು ಸುಂದರ್ ಅವರು ಕಾಂಗ್ರೆಸ್ನಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 2018ರಲ್ಲಿ ಟ್ವೀಟ್ ಮಾಡಿ, ಲಲಿತ್ ಮೋದಿಯಾಗಿರಲಿ ಅಥವಾ ನರೇಂದ್ರ ಮೋದಿಯಾಗಿರಲಿ, ಎಲ್ಲ ಕಳ್ಳರ ಸರ್ ನೇಮ್ ಕೂಡ ಮೋದಿಯೇ ಆಗಿರುವುದೇಕೆ?ಎಂದು ಪ್ರಶ್ನಿಸಿದ್ದು, ಅವರ ವಿರುದ್ಧ ಕ್ರಮವಿಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರೂ ಈ ಟ್ವೀಟ್ನ ಶೇರ್ ಮಾಡಿಕೊಂಡಿದ್ದಾರೆ.