ಶಿವಮೊಗ್ಗ, ಮಾ 21(MSP): ಗೆಳೆಯರಿಬ್ಬರು ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಹೊಸನಗರದ ಮಾರಿಗುಡ್ಡದಲ್ಲಿ ಮಾ.21 ರ ಗುರುವಾರ ನಡೆದಿದೆ. ಕೂಲಿಕಾರ್ಮಿಕರಾಗಿದ್ದ ಶ್ರೀಕಾಂತ್ (29) ಹಾಗೂ ಪ್ರಕಾಶ್ (32) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ಇವರಿಬ್ಬರು ಸ್ಮಶಾನವೊಂದರಲ್ಲಿರುವ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಕಾಂತ ಮತ್ತು ಪ್ರಕಾಶ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇವರಿಬ್ಬರು ಮದ್ಯವ್ಯಸನಿಗಳಾಗಿದ್ದರು ಎಂದು ತಿಳಿದುಬಂದಿದೆ.
ಬುಧವಾರ ರಾತ್ರಿಯೂ ಸ್ಮಶಾನದಲ್ಲಿ ಇಬ್ಬರು ಮದ್ಯಸೇವಿಸುತ್ತಾ ಕುಳಿತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಆದರೆ ಮುಂಜಾನೆ ವಾಕಿಂಗ್ ಗೆ ಹೋಗುವವರಿಗೆ ಇವರಿಬ್ಬರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.