ಪಾಟ್ನಾ, ಮಾ 25 (DaijiworldNews/DB): ರಾಹುಲ್ ಗಾಂಧಿಯವರ ತರಾತುರಿಯ ಅನರ್ಹತೆ ಹಿಂದೆ ಕೇಂದ್ರ ಸರ್ಕಾರದ ಪಾತ್ರ ಇದೆ ಎಂದು ಬಿಹಾರದ ಜನತಾ ದಳ-ಯುನೈಟೆಡ್ (ಜೆಡಿಯು) ಮುಖಂಡ ಲಲನ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ವಿರುದ್ದ ದಾಖಲಾದ ಮಾನನಷ್ಟ ಮೊಕದ್ದಮೆ ವಿಚಾರವಾಗಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ತರಾತುರಿಯಲ್ಲಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹ ಮಾಡಲಾಗಿದೆ. ಈ ತರಾತುರಿಯ ಕೆಲಸದ ಹಿಂದೆ ಕೇಂದ್ರದ ಸಕ್ರಿಯ ಪಾತ್ರ ಇರುವುದು ಸ್ಪಷ್ಟ ಎಂದರು.
ಯಾವುದೇ ಪ್ರಕರಣದಲ್ಲೇ ಆದರೂ ಸಂಸತ್ತು ಮತ್ತು ಶಾಸಕಾಂಗ ಸದಸ್ಯರ ಮೇಲಿರುವ ಅಪರಾಧ ಸಾಬೀತಾದರೆ ಅವರನ್ನು ಆ ಸ್ಥಾನದಿಂದ ಅನರ್ಹಗೊಳಿಸಲು ಕಾರ್ಯವಿಧಾನಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸಬೇಕು. ಚುನಾವಣಾ ಆಯೋಗದಿಂದಲೂ ಅಧಿಸೂಚನೆ ಬಂದ ಮೇಲೆ ರಾಷ್ಟ್ರಪತಿಗಳ ಅನುಮೋದನೆ ಪಡೆದುಕೊಂಡು ಬಳಿಕ ಲೋಕಸಭಾ ಸ್ಪೀಕರ್ ಕಾರ್ಯ ನಿರ್ವಹಣೆ ಮಾಡಬೇಕು. ಇದಕ್ಕೆಲ್ಲಾ ತುಸು ಸಮಯ ಹಿಡಿಯುವುದು ನಿಸ್ಸಂಶಯ. ಆದರೆ ರಾಹುಲ್ ಪ್ರಕರಣದಲ್ಲಿ ಅತಿ ಕಡಿಮೆ ಅವಧಿಯಲ್ಲೇ ಅನರ್ಹತೆ ಆದೇಶವಾಗಿರುವುದನ್ನು ನೋಡಿದರೆ ಇದರಲ್ಲಿ ಕೇಂದ್ರದ ಪಾತ್ರ ಇರುವ ಸಂಶಯ ಬರುತ್ತದೆ ಎಂದವರು ಅನುಮಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಹತಾಶೆಯ ಸಂಕೇತವಿದು. ಆದರೆ ದೇಶದ ಜನ ಬುದ್ದಿವಂತರು. ಸರಿಯಾದ ಸಮಯದಲ್ಲಿ ಬಿಜೆಪಿಗೆ ಜನರು ಪಾಠ ಕಲಿಸುವುದು ನಿಶ್ಚಿತ ಎಂದರು.