ಮುಂಬೈ, ಮಾ 27 (DaijiworldNews/HR): ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ ಅವರು ತಮ್ಮ ಸಹೋದರ ಮತ್ತು ಪತ್ನಿಯ ವಿರುದ್ಧ ರೂ. 100 ಕೋಟಿ ಪರಿಹಾರ ಕೋರಿ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಮೊಕದ್ದಮೆಯನ್ನು ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿ ಆರ್ ಐ ಚಗ್ಲಾ ಅವರ ಏಕಸದಸ್ಯ ಪೀಠದ ಮುಂದಿಡಲಾಗಿದ್ದು ಮಾರ್ಚ್ 30 ರಂದು ವಿಚಾರಣೆ ನಡೆಯಲಿದೆ ಎಂದು ವರದಿಯಾಗಿದೆ.
ಸಹೋದರ ಶಂಸುದ್ದೀನ್ ಸಿದ್ದಿಕಿ ಹಾಗೂ ಪರಿತ್ಯಕ್ತ ಪತ್ನಿ ಅಂಜನಾ ಪಾಂಡೆ ಅಲಿಯಾಸ್ ಝೈನಾಬ್ ಸಿದ್ದಿಕಿ ತಮ್ಮ ವಿರುದ್ಧ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನವಾಝುದ್ದೀನ್ ಮೊಕದ್ದಮೆಯಲ್ಲಿ ಹೇಳಿದ್ದಾರೆ.
ಇನ್ನು ನನ್ನ ವಿರುದ್ಧ ಮಾಧ್ಯಮ ಅಥವಾ ಬೇರೆ ಯಾವುದೇ ಪ್ಲಾಟ್ಫಾರ್ಮ್ನಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡುವುದರಿಂದ ತಮ್ಮ ಸಹೋದರ ಮತ್ತು ಪತ್ನಿಗೆ ತಡೆಯಾಜ್ಞೆ ವಿಧಿಸಬೇಕೆಂದು ನವಾಝುದ್ದೀನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.