ನವದೆಹಲಿ,ಮಾ 27 (DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟಂತೆ ಗುಜರಾತ್ ನ ಸೂರತ್ ನ್ಯಾಯಾಲಯ 2 ವರ್ಷ ಜೈಲುಶಿಕ್ಷೆ ನೀಡಿದ ಬೆನ್ನಲ್ಲೇ ಅವರು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ಹಾಗೂ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಿಆರ್ಎಸ್, ಸಮಾಜವಾದಿ ಪಕ್ಷ ಸೇರಿದಂತೆ ಸಮಾನ ಮನಸ್ಕ ವಿಪಕ್ಷಗಳ ಸಂಸದರು ಸಂಸತ್ತಿನ ಸಂಕೀರ್ಣಿದಲ್ಲಿ ಸೋಮವಾರ ಸಭೆ ನಡೆಸಿದ್ದಾರೆ.
ವಿಶೇಷವಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಅಪರೂಪದ ಪ್ರದರ್ಶನದಲ್ಲಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇಂದು ಮೊದಲ ಬಾರಿಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಕಾರ್ಯತಂತ್ರದ ಸಭೆಯನ್ನು ಸೇರಿಕೊಂಡಿದೆ. ಇದು ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ಸಮಾನವಾಗಿ ಉಳಿಯುವುದಾಗಿ ಘೋಷಿಸಿದ ನಂತರ ನಡೆದ ಪ್ರಮುಖ ಬದಲಾವಣೆಯನ್ನು ಸೂಚಿಸಿದೆ.
ತೃಣಮೂಲದ ಅಚ್ಚರಿಯ ನಡೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಪ್ರಜಾಪ್ರಭುತ್ವವನ್ನು ರಕ್ಷಿಸಲು" ಯಾರೇ ಮುಂದೆ ಬಂದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಅನರ್ಹತೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಾಂಗ್ರೆಸ್ ಸಂಸದರು ಕಪ್ಪು ಶರ್ಟ್ ಧರಿಸಿದ್ದರು.
ಸಭೆಯಲ್ಲಿ ಪ್ರಮುಖವಾಗಿಯೂ ರಾಹುಲ್ ಗಾಂಧಿಯವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಮತ್ತು ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಯಿತು.