ಚೆನ್ನೈ, ಮಾ 30 (DaijiworldNews/DB): ಆಟವಾಡಿದ್ದು ಸಾಕು, ಓದು ಎಂದು ತಂದೆ ಬುದ್ದಿವಾದ ಹೇಳಿದ್ದಕ್ಕೆ ನೊಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ತಿರುವಳ್ಳೂರ್ನಲ್ಲಿ ಕಳೆದ ಸೋಮವಾರ ನಡೆದಿದೆ.
9 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದವಳು. ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದ ವೇಳೆ ತಂದೆ ಆಟವಾಡಿದ್ದು ಸಾಕು, ಓದಿಕೋ ಎಂದು ಹೇಳಿ ಮನೆಯ ಕೀಯನ್ನು ಆಕೆಗೆ ನೀಡಿ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ರಾತ್ರಿ ಕೆಲಸದಿಂದ ಮನೆಗೆ ಬಂದ ತಂದೆ ಬಾಗಿಲು ತೆಗೆಯುವಂತೆ ಮಗಳನ್ನು ಕೂಗಿದ್ದಾರೆ. ಆದರೆ ಆಕೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ತಂದೆ ಕೃಷ್ಣಮೂರ್ತಿ ಕಿಟಕಿ ಒಡೆದು ಮನೆಯೊಳಗೆ ಹೋಗಿದ್ದಾರೆ.
ಮನೆಯೊಳಗೆ ಹೋದಾಗ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821