ಬೆಂಗಳೂರು, ಮಾ 30 (DaijiworldNews/DB): ಸಿದ್ದರಾಮಯ್ಯನವರು ಕಾಂಗ್ರೆಸ್ ತ್ಯಜಿಸಿ ಹೊಸ ಪಕ್ಷ ಕಟ್ಟಿ ಎರಡು ಸೀಟು ಗೆದ್ದು ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಜೆಡಿಎಸ್ನಲ್ಲಿ ಅಪ್ಪ, ಮಕ್ಕಳ ಮಾತು ಕೇಳದಿದ್ದರೆ ಹೊರ ಹಾಕುತ್ತಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯನವರ ಮಾತು ವಿಶ್ವದ ಎಂಟನೇ ಅದ್ಬುತದಂತಿದೆ. ಸ್ಟೇಜ್ ಹಾಕಿ ಜನ ಸೇರಿಸಲು ನಾವು, ಅವರು ಬಂದು ಕುಳಿತುಕೊಳ್ಳುತ್ತಿದ್ದರು. ಕಾಲು ಮೇಲೆ ಕಾಲು ಹಾಕಿ ದೇವೇಗೌಡರನ್ನು ಒದ್ದುಕೊಂಡು ಕೂರುತ್ತಿದ್ದರು ಎಂದು ಕುಹಕವಾಡಿದರು.
ಬ್ಯಾನರ್ನಲ್ಲಿ ಫೋಟೋ ಇಲ್ಲದಿದ್ದರೆ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ. ಅವರು ಕಾಂಗ್ರೆಸ್ ಬಿಟ್ಟು ಹೊಸ ಪಕ್ಷ ಸ್ಥಾಪನೆ ಮಾಡಿ ಎರಡು ಸೀಟು ಗೆದ್ದು ತೋರಿಸಲಿ ಎಂದು ಸವಾಲೆಸೆದರು.
ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ, ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ವಿರುದ್ದ ಮಾತನಾಡುವುದಕ್ಕಿಂತ ಆ ಎರಡೂ ಪಕ್ಷಗಳು ಅವರ ದುಡಿಮೆ ಬಗ್ಗೆ ಮಾತನಾಡಲಿ. ಹಣ ನೀಡಿ ತಮ್ಮ ಪರ ಸಮೀಕ್ಷೆ ಮಾಡಿಸಿಕೊಳ್ಳುವುದನ್ನು ಬಿಡಲಿ ಎಂದು ಕುಟುಕಿದರು.
ಒಪ್ಪಂದ ಎಂಬುದನ್ನು ಪದೇ ಪದೇ ಹೇಳುವ ಮೂಲಕ ಹಾಸ್ಯಾಸ್ಪದಕ್ಕೆ ಒಳಗಾಗಬೇಡಿ. ನಾನು ಸುಳ್ಳು ಹೇಳಲಾರೆ. ಎರಡೂ ಪಕ್ಷಗಳಲ್ಲಿಯೂ ಜೆಡಿಎಸ್ನ ವಿಶ್ವಾಸಕ್ಕೆ ಪಡೆಯುವ ಕುರಿತು ಸ್ಪರ್ಧೆ ಶುರುವಾಗಿದೆ. ನನ್ನನ್ನೂ ಸಂಪರ್ಕಿಸಿದ್ದಾರೆ. ಆದರೆ ಅದು ಅಸಾಧ್ಯ. ಕಳೆದ ಒಂದೂವರೆ ದಶಕದಿಂದ ಟ್ರಾಪ್ ಆಗಿರುವುದೇ ಸಾಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.