ಚೆನ್ನೈ, ಮಾ 30 (DaijiworldNews/DB): ನೋ ಬ್ಯಾಗ್ ಡೇಯನ್ನು ಸಂಭ್ರಮಿಸಲು ಚೆನ್ನೈನ ಮಹಿಳಾ ಕಾಲೇಜೊಂದರ ವಿದ್ಯಾರ್ಥಿನಿಯರು ಪ್ರೆಶರ್ ಕುಕ್ಕರ್, ಗಿಟಾರ್, ಡ್ರಮ್ನಂತಹ ವಸ್ತುಗಳಲ್ಲಿ ಪುಸ್ತಕ ಹಾಕಿ ಕಾಲೇಜಿಗೆ ಕೊಂಡೊಯ್ದ ತಮಾಷೆಯ ಪ್ರಸಂಗವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿನಿಯರ ಸಂಭ್ರಮಕ್ಕೆ ನೆಟ್ಟಿಗರೂ ಖುಷಿ ಪಟ್ಟಿದ್ದಾರೆ.
ಪ್ರೆಶರ್ ಕುಕ್ಕರ್ಗಳು, ಲಾಂಡ್ರಿ ಬುಟ್ಟಿಗಳು, ಬಕೆಟ್ಗಳು, ಟವೆಲ್ಗಳು, ದಿಂಬಿನ ಕವರ್ಗಳು, ರಟ್ಟಿನ ಪೆಟ್ಟಿಗೆಗಳು, ಸೂಟ್ಕೇಸ್ಗಳು, ಟ್ರಾಲಿ ಬ್ಯಾಗ್ಗಳು, ಗಿಟಾರ್ ಬ್ಯಾಗ್ಗಳು ಸೇರಿದಂತೆ ಚಿತ್ರ ವಿಚಿತ್ರ ವಸ್ತುಗಳನ್ನು ಹಿಡಿದುಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದಾರೆ.
ಅಲ್ಲದೆ ಅವುಗಳನ್ನು ಕ್ಯಾಮರಾಗಳೆದುರು ಪ್ರದರ್ಶಿಸಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, 17 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 1.3 ಲಕ್ಷ ಲೈಕ್ ಪಡೆದುಕೊಂಡಿದೆ. ವೀಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರವಿಡೀ ಬ್ಯಾಗ್ ಹೊತ್ತು ಕಾಲೇಜಿಗೆ ತೆರಳುವ ಮಕ್ಕಳು ಬ್ಯಾಗ್ ಡೇಯಂದಾದರೂ ಇಂತಹ ಸಂಭ್ರಮ ಆಚರಿಸಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.