ಬೆಂಗಳೂರು, ಮಾ 30 (DaijiworldNews/DB): ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಿರುದ್ದ ಮೂರು ದೂರುಗಳನ್ನು ನೀಡಿದ್ದೇನೆ. ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ಸಿದ್ದರಾಮಯ್ಯ ನಿನ್ನೆ ಪ್ರಚಾರದಲ್ಲಿ ತೊಡಗಿದ್ದರು. ಅಲ್ಲದೆ ವಾಲಗ ಬಾರಿಸುವವರಿಗೆ ಹಣ ನೀಡಿದ್ದಾರೆ. ಈ ಸಂಬಂಧ ಅವರ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಇನ್ನು ಮುಖ್ಯಮಂತ್ರಿಯವರನ್ನು ಶಕುನಿ ಎಂಬುದಾಗಿಯೂ, ಪ್ರಧಾನಿಯವರ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಕ್ಕಾಗಿ ಸುರ್ಜೇವಾಲ ವಿರುದ್ದ ದೂರು ಸಲ್ಲಿಸಲಾಗಿದೆ ಎಂದರು.
ಕಾಂಗ್ರೆಸ್ನ್ನು ಕಟ್ಟಿ ಹಾಕಲೆಂದು ಚುನಾವಣಾ ಆಯೋಗ ಐಟಿ ಅಧಿಕಾರಿಗಳನ್ನು ನಿಯೋಜಿಸಿದೆ ಎನ್ನುವ ಮೂಲಕ ಚುನಾವಣಾ ಆಯೋಗದ ಮೇಲೆಯೇ ಆರೋಪ ಮಾಡಿರುವ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಚುನಾವಣಾಧಿಕಾರಿಗಳ ಮೇಲೆ ಜನರಿಗೆ ಅಪನಂಬಿಕೆ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಸಿದ್ದು ವಿರುದ್ದ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಜೆಪಿ ಸರ್ಕಾರದ ವಿರುದ್ದ ಆಧಾರರಹಿತ ವೃಥಾರೋಪ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ದ ಆಧಾರರಹಿತ ಆರೋಪ ಮಾಡುವ ಬದಲಾಗಿ ಚುನಾವಣಾ ಆಯೋಗ, ಲೋಕಾಯುಕ್ತ, ಕೋರ್ಟ್ನಲ್ಲಿ ದೂರು ದಾಖಲಿಸಬಹುದಿತ್ತು. ಆದರೆ ಅವರ ಯೋಗ್ಯತೆಗೆ ಅದು ಸಾಧ್ಯವಾಗಿಲ್ಲ ಎಂದು ಜರೆದರು.
ಆಧಾರರಹಿತ ಆರೋಪ ಮಾಡಬೇಡಿ. ಆಧಾರ ಇಟ್ಟುಕೊಂಡು ಮಾತನಾಡಿ. ಇಲ್ಲವಾದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಇದೇ ವೇಳೆ ಛಲವಾದಿ ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.