ಇಂದೋರ್, ಮಾ 31 (DaijiworldNews/HR): ಇಂದೋರ್ ದೇವಸ್ಥಾನದ ಸ್ಟೆಪ್ ವೆಲ್ (ಮೆಟ್ಟಿಲುಗಳ ಬಾವಿ) ಮೇಲೆ ಹಾಕಲಾಗಿದ್ದ ಸಿಮೆಂಟ್ ಹಾಸು ಕುಸಿದ ಘಟನೆಯಲ್ಲಿ ಸಾವಿನ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ ಎಂದು ಇಂದೋರ್ ಜಿಲ್ಲಾಧಿಕಾರಿ ಡಾ.ಇಳಯರಾಜ. ಟಿ ತಿಳಿಸಿದ್ದಾರೆ.
ಪಟೇಲ್ ನಗರದಲ್ಲಿರುವ ಈ ದೇವಸ್ಥಾನದಲ್ಲಿ ರಾಮ ನವಮಿ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಬಾವಿಯ ಮೇಲೆ ಹಾಸಿದ್ದ ಸಿಮೆಂಟ್ ಹಾಸು ಜನರ ಭಾರ ತಡೆಯಲಾಗದೆ ಕುಸಿದು ಬಿದ್ದಿದೆ. ಇದರಿಂದ ಅದರ ಮೇಲಿದ್ದವರೆಲ್ಲರೂ ಬಾವಿಯೊಳಗೆ ಬಿದ್ದಿದ್ದು, ಅದರಲ್ಲಿ ಒಟ್ಟು 35 ಜನರು ಸಾವನ್ನಪ್ಪಿದ್ದಾರೆ, ಒಬ್ಬರು ಕಾಣೆಯಾಗಿದ್ದಾರೆ ಮತ್ತು 14 ಜನರನ್ನು ರಕ್ಷಿಸಲಾಗಿದೆ.
ಇನ್ನು 18 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಮಧ್ಯಾಹ್ನ 12:30 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಇನ್ನೂ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.