ಬೆಂಗಳೂರು, ಮಾ. 28 (DaijiworldNews/SM): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿ ಸಾಗಿದೆ. ಈ ನಡುವೆ ಈಗಾಗಲೇ ಚುನಾವಣೆಯಿಂದ ದೂರ ಸರಿದಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರನ್ನು ಮೂಲೆಗುಂಪಾಗಿಸೋದಕ್ಕೆ ಹುನ್ನಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಆರೋಪ ಮಾಡಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಇನ್ನೂ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದಾಗಿ ಮೈಸೂರು ಜಿಲ್ಲೆಯ 'ವರುಣಾ ಕ್ಷೇತ್ರ' ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಇದು ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಕ್ಷೇತ್ರದಾದ್ಯಂತ ಓಡಾಡುತ್ತಾ ಮತದಾರರ ಮನವೊಲಿಸಲು ನಿರತರಾಗಿದ್ದಾರೆ. ಇವರಿಗೆ ಸೆಡ್ಡು ಹೊಡೆಯಲು ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದು, ಚುನಾವಣಾ ಕಾರ್ಯತಂತ್ರ ಕುರಿತು ಚರ್ಚಿಸಿದ್ದಾರೆ. ಈ ಮಧ್ಯೆ ವಿಜಯೇಂದ್ರ ವರುಣಾನಿಂದ ಸ್ಪರ್ಧೆ ಮಾಡಲ್ಲ, ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ ವರುಣಾ ಕ್ಷೇತ್ರಕ್ಕೆ ಬಿವೈ ವಿಜಯೇಂದ್ರ ಅವರನ್ನು ತಳ್ಳಿ 'ಹರಕೆಯ ಕುರಿ'ಯಾಗಿಸುವ ಪ್ರಯತ್ನ ನಡೆದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಯಡಿಯೂರಪ್ಪ & ಸನ್ಸ್ ಕಂಪೆನಿಯನ್ನು ಮುಗಿಸಲು ರಾಜ್ಯ ಬಿಜೆಪಿ ಹೀಗೆಲ್ಲ ತಂತ್ರ ಹೂಡುತ್ತಿದೆ. ಅದರ ಮುಂದುವರೆದ ಭಾಗವಾಗಿ ವರುಣಾ ಕ್ಷೇತ್ರಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ತಳ್ಳಿ "ಹರಕೆಯ ಕುರಿ"ಯಾಗಿಸುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.