ಅಜ್ಮೇರ್, ರಾಜಸ್ತಾನ್: ಏ 01 (DaijiworldNews/SS): 'ದೇಶದ ಪರಿಸ್ಥಿತಿಯು ಕಳವಳಕಾರಿಯಾಗಿದ್ದು ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರನ್ನ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿರುವುದನ್ನು ಆಕ್ಷೇಪಿಸಿ, ಶುಕ್ರವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, 'ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅದಾನಿ ವಿರುದ್ಧ ಮಾತನಾಡಿದ್ದರು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ, ಉತ್ತರಿಸಲು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ಅವರ ಪ್ರಶ್ನೆಗೆ ಉತ್ತರಿಸುವುದನ್ನು ಬಿಟ್ಟು, ಅವರನ್ನೇ ಸಂಸತ್ತಿನಿಂದ ಹೊರ ಹಾಕಿದೆ. ದೇಶ ಎತ್ತ ಸಾಗುತ್ತಿದೆ..? ಪ್ರಜಾಪ್ರಭುತ್ವ ಅಪಾಯದಲ್ಲಿದೆ. ನ್ಯಾಯಾಂಗ ಒತ್ತಡದಲ್ಲಿದೆ. ಐಟಿ, ಇಡಿ, ಸಿಬಿಐ ದಾಳಿ ನಡೆಯುತ್ತಲೇ ಇದೆ. ಇದು ಇನ್ನೆಷ್ಟು ದಿನ ಮುಂದುವರಿಯುತ್ತದೆ..?' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ, 'ಈ ರೀತಿ ಮಾಡುವುದರಿಂದ ಇದು ದೇಶದ ಮೇಲೆ, ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ಪ್ರಭಾವ ಬೀರುತ್ತದೆ. ಇದನ್ನು ನಮ್ಮ ದೇಶದ ಪ್ರಜೆಗಳು ಅರ್ಥ ಮಾಡಿಕೊಳ್ಳಬೇಕು' ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ರಾಹುಲ್ ಗಾಂಧಿ 2019ರಲ್ಲಿ ಕರ್ನಾಟಕದಲ್ಲಿ ಭಾಷಣ ಮಾಡುವ ವೇಳೆ, 'ಎಲ್ಲ ಕಳ್ಳರ ಉಪನಾಮ ಮೋದಿ ಎಂದು ಇರಲು ಹೇಗೆ ಸಾಧ್ಯ..?' ಅನ್ನುವ ರೀತಿ ಕೇಳಿದ್ದರು. ಈ ಬಗ್ಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕೇಸ್ ತೀರ್ಪು ಈಗ ಬಂದಿದ್ದು, 2 ವರ್ಷ ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ನೀಡಲಾಗಿತ್ತು. ಇದೀಗ ಜಾಮೀನು ಸಹ ಸಿಕ್ಕಿದೆ. ಅಲ್ಲದೇ ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಇನ್ನು 6 ವರ್ಷ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ.ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಕೂಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮನ್ನು ತಾವೇ ಅನರ್ಹ ಶಾಸಕನೆಂದು ಹೇಳಿಕೊಂಡಿದ್ದಾರೆ.