ಮಂಡ್ಯ, ಏ 01 (DaijiworldNews/MS): "ನಾನು ವರುಣಾ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಚುನಾವಣೆಗೆ ನಿಲ್ಲುವುದಿಲ್ಲ" ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, "ತಂದೆ ಸಿದ್ದರಾಮಯ್ಯ ಅವರಿಗೆ ಇದು ಕೊನೆಯ ಚುನಾವಣೆ. ಅವರು ಸಿಎಂ ಆಗಬೇಕು. ಒಬ್ಬ ಮಗನಾಗಿ ತಂದೆ ಸಿಎಂ ಆಗಲಿ ಎಂದು ಯಾರಿಗೆ ಆಸೆ ಇರಲ್ಲ ಹೇಳಿ. ಹೀಗಾಗಿ ನಾನು ಅವರ ಪರವಾಗಿ ನಾನು ಜನವರಿಯಿಂದಲೇ ಪ್ರಚಾರ ಪ್ರಾರಂಭ ಮಾಡಿದ್ದೇನೆ" ಎಂದು ಹೇಳಿದ್ದಾರೆ.
"ತಂದೆ ಮತ್ತೆ ಸಿಎಂ ಆದರೆ ರಾಜ್ಯವನ್ನು ಅಭಿವೃದ್ಧಿ ಮಾರ್ಗದಲ್ಲಿ ಮುನ್ನಡೆಸುತ್ತಾರೆ. ಕಳೆದ ಬಾರಿ ಅವರು ಒಳ್ಳೆಯ ಆಡಳಿತ ಕೊಟ್ಟಿದ್ದರೂ ಕೂಡ ಜನ ಬಹುಮತ ನೀಡಿರಲಿಲ್ಲ. ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟು ತಂದೆಯವರು ಸಿಎಂ ಆದರೆ, ಆಗ ಅವರು ಕೊಟ್ಟ ಆಡಳಿತಕ್ಕೆ ಮತ್ತೊಮ್ಮೆ ಒಂದು ವ್ಯಾಲಿಡೇಷನ್ ದೊರಕಿದಂತೆ ಆಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಆದರೆ ಖಂಡಿತ ರಾಜ್ಯವನ್ನ ಅಭಿವೃದ್ಧಿ ಪಥದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಆಶಯವಿದೆ" ಎಂದು ಹೇಳಿದ್ದಾರೆ.
"ವರುಣಾ ಕ್ಷೇತ್ರ ಯಾವೊಬ್ಬ ವ್ಯಕ್ತಿಗೆ ಸೇರಿದ್ದಲ್ಲ. ತಂದೆಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿಲ್ಲ. ನಾನು ಯಾವುದೇ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ" ಎನ್ನುವ ಮೂಲಕ ಯತೀಂದ್ರ ಕ್ಷೇತ್ರದ ಬಗ್ಗೆ ಇದ್ದ ಅನುಮಾನ ಕೊನೆಯಾಗಿದೆ.