ಲಖನೌ, ಏ 01 (DaijiworldNews/SS): ಭಾರತೀಯರ ಬಹುದಿನಗಳ ಆಶಯವಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು, 2024ರಲ್ಲಿ ಕೆಲಸ ಪೂರ್ಣಗೊಂಡು ಉದ್ಘಾಟನೆ ಸಜ್ಜಾಗಲಿದೆ.
2024ರಲ್ಲಿ ರಾಮ ಮಂದಿರ ನಿರ್ಮಾಣ ಕೆಲಸ ಪೂರ್ಣಗೊಂಡರೆ ಅದು ಬಿಜೆಪಿ ಪಾಲಿಗೆ ಸಂತಸದ ದಿನವಾಗುತ್ತದೆ. 1980ರಲ್ಲಿ ರಾಮಮಂದಿರ ಅಸ್ತಿತ್ವಕ್ಕೆ ಬಂದ ಕ್ಷಣದಿಂದಲೇ, ಬಿಜೆಪಿಯ ರಾಜನೀತಿಯ ಆಧಾರವಾಗಿತ್ತು. ಅಲ್ಲದೇ ರಾಮಮಂದಿರ ಮತ್ತು ಬಾಬ್ರಿ ಮಸೀದಿ ವಿವಾದದಿಂದ ಹಲವು ಸಮಸ್ಯೆಗಳನ್ನ ಕೂಡ ಬಿಜೆಪಿ ಎದುರಿಸಿತ್ತು.
ಇನ್ನು 2024ರಲ್ಲಿ ರಾಮಮಂದಿರದ ನೆಲಮಹಡಿ ತಯಾರಾದ ಬಳಿಕ ಅಲ್ಲಿ ರಾಮನ ಮೂರ್ತಿಯನ್ನು ಸ್ಥಾಪನೆ ಮಾಡಲಾಗುತ್ತದೆ. ನಂತರ ಭಕ್ತರಿಗೂ ರಾಮನ ದರ್ಶನ ಮಾಡಲು ಅವಕಾಶ ಮಾಡಿ ಕೊಡಲಾಗುತ್ತದೆ. ಇದಾದ ಬಳಿಕ 71 ಎಕರೆ ಜಾಗದಲ್ಲಿ ದೇವಸ್ಥಾನದ ಮೊದಲ ಮಹಡಿ ಮತ್ತು ಎರಡನೇಯ ಮಹಡಿ ಕಟ್ಟಡ ಪೂರ್ಣಗೊಳ್ಳಲು ಇನ್ನೊಂದು ವರ್ಷ ಬೇಕು. 2025ರಲ್ಲಿ ಪೂರ್ತಿಯಾಗಿ ರಾಮ ಮಂದಿರ ನಿರ್ಮಾಣವಾಗಬಹುದು. ಹಾಗಾಗಿ ಪೂರ್ತಿ ಕಟ್ಟಡ ನಿರ್ಮಾಣವಾಗುವವರೆಗೂ ಕಾಯದೇ, ನೆಲಮಹಡಿ ಕಟ್ಟಡ ಕಾರ್ಯ ಪೂರ್ಣಗೊಂಡ ಬಳಿಕವೇ, ರಾಮನ ಮೂರ್ತಿ ಪ್ರತಿಷ್ಠಾಪಿಸಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಬಿಜೆಪಿ ಮುಂದಿನ ವರ್ಷವೇ ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ದರ್ಶನಕ್ಕೆ ಅನುವು ಮಾಡಿಕೊಡಬೇಕೆಂದುಕೊಂಡಿದೆ. ಯಾಕಂದ್ರೆ ಲೋಕಸಭೆ ಚುನಾವಣೆ ಭಾಗವಧ್ವಜ ಬಳಸುವ ಮೂಲಕವೇ ಶುರುವಾಗಲಿ ಎಂದು ಬಿಜೆಪಿ ನಾಯಕರು ಬಯಸಿದ್ದಾರೆ.
ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆ ಪ್ರಚಾರ ಅಭಿಯಾನಕ್ಕೂ ಮುನ್ನವೇ, ಅಯೋಧ್ಯಾ ರಾಮಮಂದಿರದ ಉದ್ಘಾಟನೆಯಾಗಲಿದೆ ಎಂದು ಹೇಳಲಾಗಿದೆ. ಹಾಗಾಗಿ 2024ರ ಚುನಾವಣೆಗೂ ಮುನ್ನವೇ ರಾಮಮಂದಿರದ ಉದ್ಘಾಟನೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಪೂರ್ತಿ ಮಂದಿರ ನಿರ್ಮಾಣವಾಗುವುದಕ್ಕೆ 1,800 ಕೋಟಿ ರೂಪಾಯಿ ಖರ್ಚಾಗಲಿದ್ದು, ರಾಮಮಂದಿರ ನೋಡಲು ಅಯೋಧ್ಯೆಗೆ ಬರುವವರು, ಆಧುನಿಕವಾದ, ಹೊಸ ಅಯೋಧ್ಯೆಯನ್ನ ಕಾಣಲಿ ಎಂಬುದು ನಮ್ಮ ಆಶಯ ಎಂದು ಓರ್ವ ಅಧಿಕಾರಿ ಹೇಳಿದ್ದಾರೆ.
ಉತ್ತರಪ್ರದೇಶ ಸರ್ಕಾರ 32 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ, ಅತ್ಯಾಧುನಿಕ ಅಯೋಧ್ಯೆ ನಿರ್ಮಾಣಕ್ಕೆ ಮುಂದಾಗಿದೆ. ಇದರಲ್ಲಿ ಅಯೋಧ್ಯೆಯನ್ನ ಅಭಿವೃದ್ಧಿಗೊಳಿಸಲು, 37 ಯೋಜನೆ, 264 ಪ್ರಾಜೆಕ್ಟ್ಗಳು ಶಾಮೀಲಾಗಿದೆ. ಈ ಯೋಜನೆಯಡಿಯಲ್ಲಿ ಅಯೋಧ್ಯೆಯಲ್ಲಿ ರಾಜಮಾರ್ಗ, ರಸ್ತೆ, ಟೌನ್ಶಿಪ್, ಭವ್ಯ ಪ್ರವೇಶ ದ್ವಾರ, ಪಾರ್ಕಿಂಗ್ ವ್ಯವಸ್ಥೆ ಎಲ್ಲವನ್ನೂ ಮಾಡಲು ತಯಾರಿ ನಡೆಸಲಾಗಿದೆ. 264 ಪ್ರಾಜೆಕ್ಟ್ಗಾಗಿ 22,500 ಕೋಟಿ ರೂಪಾಯಿ ಮೀಸಲಿಡಲಾಗಿದ್ದು,ಈ ಕೆಲಸವನ್ನ 2024ರಲ್ಲೇ ಮುಗಿಸಲಾಗುತ್ತದೆ ಎಂದು ವರದಿಯಾಗಿದೆ.
ಇನ್ನು ಹೊಸ ಅಯೋಧ್ಯೆಯಲ್ಲಿ ಸ್ಥಾಪಿತವಾಗುತ್ತಿರುವ ರಾಮಮಂದಿರವನ್ನ ಜನ ನೋಡಲಿ ಎಂಬುದು ಬಿಜೆಪಿಯ ಆಶಯವಾಗಿದೆ. ಅಲ್ಲದೇ ಈ ದೇವಸ್ಥಾನ ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ. ಬದಲಾಗಿ ಲಕ್ಷಾಂತರ ಜನರ ಭಕ್ತಿಯ ಸಂಕೇತ ಎಂದು ಬಿಜೆಪಿಗರು ಹೇಳಿದ್ದಾರೆ.