ಬೆಂಗಳೂರು,ಮಾ22(AZM):ಸಾರಿಗೆ ಇಲಾಖೆ ನೀಡಿದ ಪರವಾನಿಗೆಯನ್ನು ದುರ್ಬಳಕೆ ಮಾಡಿದ ಆರೋಪದ ಹಿನ್ನಲೆ ಓಲಾ ಕ್ಯಾಬ್ ಸಂಸ್ಥೆಗೆ ನೀಡಿದ್ದ ಪರವಾನಿಗೆಯನ್ನು ರಾಜ್ಯ ಸರಕಾರ ರದ್ದುಗೊಳಿಸಿದೆ. ಓಲಾಗೆ ಪರವಾನಿಗೆ ನೀಡುವ ವೇಳೆ ವಿಧಿಸಲಾಗಿದ್ದ ನಿಯಮಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಓಲಾ ಸಂಸ್ಥೆ ನಿಗದಿಗಿಂತ ದುಪ್ಪಟ್ಟು ದರ ಸುಲಿಗೆ ಮಾಡುವುದೂ ಸೇರಿದಂತೆ ಅನೇಕ ದೂರುಗಳು ಓಲಾ ವಿರುದ್ಧ ಕೇಳಿಬಂದಿದ್ದವು. ಹಾಗೆಯೇ ಅನುಮತಿ ಇಲ್ಲದಿದ್ದರೂ ಓಲಾದಿಂದ ದ್ವಿಚಕ್ರ ಸೇವೆ ನಡೆಯುತ್ತಿದ್ದು, ಇದು ಕೂಡಾ ಸಾರಿಗೆ ನಿಯಮಗಳ ಉಲ್ಲಂಘನೆಯಾಗಿತ್ತು.
ಈ ಸಂಬಂಧ ಒಂದು ವಾರದೊಳಗೆ ವಿವರಣೆ ನೀಡಬೇಕೆಂದು ಸಾರಿಗೆ ಇಲಾಖೆ ಫೆ. 15ರಂದು ನೋಟೀಸ್ ಕೂಡ ನೀಡಿತ್ತು. ಇದಕ್ಕೆ ಓಲಾ ಸಂಸ್ಥೆ ನೀಡಿದ ವಿವರಣೆ ಸಮಪರ್ಕವಾಗಿಲ್ಲವೆಂದು ಪರಿಗಣಿಸಿದ ಸರಕಾರ ಓಲಾಗೆ ನೀಡಿದ್ದ ಪರವಾನಿಗೆಯನ್ನು ರದ್ದುಗೊಳಿಸಿ ಟ್ಯಾಕ್ಸಿ ಸೇವೆಯನ್ನು ತತ್ಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ. ಇದರೊಂದಿಗೆ ಓಲಾ ಟ್ಯಾಕ್ಸಿ ಸೇವೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿಯವರೆಗೂ ಸ್ಥಗಿತಗೊಳ್ಳಲಿದೆ.