ಕೋಝಿಕ್ಕೋಡ್, ಏ 02 (DaijiworldNews/MS): ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಅಪರಿಚಿತ ವ್ಯಕ್ತಿಯೋರ್ವ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವ ಘಟನೆ ಕೇರಳದ ಕೋಝಿಕ್ಕೋಡ್ ನ ಎಲತ್ತೂರ್ ರೈಲು ನಿಲ್ದಾಣದ ಬಳಿ ನಡೆದಿದೆ.
ಭಾನುವಾರ ತಡರಾತ್ರಿ ಕೇರಳದ ಕಣ್ಣೂರಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ಎರಡು ವರ್ಷದ ಮಗು ಸೇರಿದಂತೆ ಮೂವರು ಪ್ರಯಾಣಿಕರು ರೈಲ್ವೆ ಹಳಿಯಲ್ಲಿ ಸಾವನ್ನಪ್ಪಿದ್ದು, ಎಂಟು ಮಂದಿಗೆ ಸುಟ್ಟ ಗಾಯಗಳಾಗಿವೆ.
ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ನಲ್ಲಿ ರಾತ್ರಿ 9.45 ಕ್ಕೆ ರೈಲು ಕೋಝಿಕ್ಕೋಡ್ ಮತ್ತು ಕಣ್ಣೂರು ನಡುವಿನ ಕೊರಪುಳ ಸೇತುವೆಯನ್ನು ದಾಟಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಸೋಮವಾರ ಮುಂಜಾನೆ ಘಟನೆ ನಡೆದ ಕೊರಪುಳ ಬಳಿಯ ಟ್ರ್ಯಾಕ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಮಹಿಳೆ ಮತ್ತು ಮಗು ಮತ್ತು ಪುರುಷ ಸೇರಿದಂತೆ ಮೂರು ಮೃತದೇಹಗಳು ಪತ್ತೆಯಾಗಿವೆ. ಒಟ್ಟು ಎಂಟು ಜನರನ್ನು ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳನ್ನು ಪ್ರಕಾರ, ರೈಲು ಕೋಝಿಕ್ಕೋಡ್ ರೈಲು ನಿಲ್ದಾಣದಿಂದ ಹೊರಟು ಕೆಲವೇ ನಿಮಿಷಗಳಲ್ಲಿ ಎರಡು ಬಾಟಲಿಗಳನ್ನು ಹೊತ್ತೊಯ್ಯುವ ಅಪರಿಚಿತ ವ್ಯಕ್ತಿ, ಕೋಚ್ಗೆ ಪ್ರವೇಶಿಸಿ ಯಾವುದೇ ಪ್ರಚೋದನೆ ಇಲ್ಲದೆ ಸಹ ಪ್ರಯಾಣಿಕರ ಮೇಲೆ ಇಂಧನವನ್ನು ಸಿಂಪಡಿಸಿ ಬೆಂಕಿ ಹಚ್ಚಿದ್ದಾನೆ ಇದರಿಂದ
ಗಾಬರಿಗೊಂಡ ಪ್ರಯಾಣಿಕರು ಇತರ ಕಂಪಾರ್ಟ್ಮೆಂಟ್ಗಳಿಗೆ ಓಡಿದರು. ಅಷ್ಟರಲ್ಲಿ ಯಾರೋ ಚೈನ್ ಎಳೆದಿದ್ದು ರೈಲು ಕೊರಪುಳ ನದಿಯ ಸೇತುವೆಯ ಮೇಲೆ ನಿಂತಿದೆ. ಈ ವೇಳೆ ಆರೋಪಿ ಪರಾರಿಯಾಗಿದ್ದಾನೆ.