ಮೈಸೂರು, ಮಾ (DaijiworldNews/HR): "ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣನಾದ ನನಗೆ ಅತೀವವಾದ ನೋವಿದ್ದು, ಪಶ್ಚಾತಾಪ ಕಾಡುತ್ತಿದೆ" ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನ ನ್ಯಾಯಾಲಯದ ಸನಿಹದಲ್ಲಿ ಇಂದು ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿ ಮಾತನಾಡಿದ ಅವರು, "ದೇವೇಗೌಡರ ಮಾತಿಗೆ ಬೆಲೆಕೊಟ್ಜು ನಾನು ಜೆಡಿಎಸ್ ಸೇರ್ಪಡೆಯಾದೆ. ಜೆಡಿಎಸ್ ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್-ಕಾಂಗ್ರೆಸ್ಸಿನ ಮೈತ್ರಿಯಲ್ಲಿ ರಾಕ್ಷಸಿ ಸರ್ಕಾರ ನಡೆಯುತ್ತಿದೆ ಎಂದು ಮನವರಿಕೆಯಾಯಿತು. ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಖಾತ್ರಿಯಾದಾಗ ಮತ್ತೊಂದು ಹೆಜ್ಜೆಯನ್ನು ಅನಿವಾರ್ಯವಾಗಿ ಇಡಬೇಕಾಯಿತು" ಎಂದರು.
ಇನ್ನು "ನನಗೆ ಮಂತ್ರಿಗಿರಿ ಸಿಗದ ಕಾರಣದಿಂದ ನಾನು ಜೆಡಿಎಸ್ ತೊರೆಯಲಿಲ್ಲ. ಮಂತ್ರಿಗಿರಿಗೆ ನಾನೆಂದಿಗೂ ಆಸೆಪಟ್ಟವನಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ಧುದರಿಂದ, ರಾಜ್ಯದಲ್ಲೂ ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಒಳಿತಾಗಲಿದೆಯೆಂದು ಸಮಾನ ಮನಸ್ಕರೊಡನೆ ಸೇರಿ ಚರ್ಚಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ" ಎಂದಿದ್ದಾರೆ.
"ಡಬಲ್ ಇಂಜಿನ್ ಸರ್ಕಾರದ ಚಿಂತನೆ ನಮ್ಮದಾಗಿದ್ದು, ಈ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗುವ ಕನಸು ಕಂಡಿದ್ದೆ. ಆದರೆ ಅದೆಲ್ಲವೂ ನುಚ್ಚುನೂರಾದವು. ಇದೊಂದು ಐತಿಹಾಸಿಕ ಪರಮ ಭಷ್ಟ ಸರ್ಕಾರವೆಂಬ ಟೀಕೆಗೆ ಗುರಿಯಾಗಿರುವುದರಿಂದ ನನಗೆ ಪಶ್ಚಾತ್ತಾಪ ಕಾಡುತ್ತಿದೆ" ಎಂದು ಹೇಳಿದ್ದಾರೆ.