ನವದೆಹಲಿ, ಏ 03 (DaijiworldNews/MS): ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ನ ಪ್ರಮುಖ ಉಗ್ರ ಯಾಸಿನ್ ಭಟ್ಕಳ್ ಹಾಗೂ ಇತರೆ 10 ಮಂದಿ ವಿರುದ್ದ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ದೇಶದ ವಿರುದ್ದ ಸಮರ ಸಾರಲು ನಡೆಸುತ್ತಿರುವ ಆರೋಪಗಳನ್ನು ದೆಹಲಿಯ ಪಟಿಯಾಲ ನ್ಯಾಯಾಲಯ ಸೋಮವಾರ ದಾಖಲಿಸಿಕೊಂಡಿದೆ.
ಭಟ್ಕಳ್, ಅನ್ಸಾರಿ, ಮೊಹಮ್ಮದ್ ಅಫ್ತಾಬ್ ಆಲಂ, ಇಮ್ರಾನ್ ಖಾನ್, ಸೈಯದ್, ಒಬೈದ್ ಉರ್ ರೆಹಮಾನ್, ಅಸಾದುಲ್ಲಾ ಅಖ್ತರ್, ಉಜ್ಜೈರ್ ಅಹ್ಮದ್, ಮೊಹಮ್ಮದ್ ತೆಹ್ಸಿನ್ ಅಖ್ತರ್, ಹೈದರ್ ಅಲಿ ಮತ್ತು ಜಿಯಾ ಉರ್ ರೆಹಮಾನ್ ವಿರುದ್ಧ ನ್ಯಾಯಾಲಯ ಆರೋಪ ದಾಖಲಿಸಿಕೊಂಡಿದೆ.
ಭಾರತದ ವಿರುದ್ಧ ಸಮರ ಸಾರಲು ಭಟ್ಕಳ ಪದೇ ಪದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ನ್ಯಾಯಾಲಯ ಗಮನಿಸಿದೆ. ಸ್ಫೋಟಕಗಳು, ಐಇಡಿಗಳ ತಯಾರಿಕೆಗೆ ಸಂಬಂಧಿಸಿದಂತೆ ಸಾಧನಗಳಿಂದ ಹೊರತೆಗೆಯಲಾದ ಡಿಜಿಟಲ್ ಡೇಟಾವು ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುವ ದೊಡ್ಡ ಪಿತೂರಿಯಲ್ಲಿ ಮಾತ್ರವಲ್ಲದೆ ಐಇಡಿಗಳು ಮತ್ತು ಸ್ಫೋಟಕಗಳನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಕೋರ್ಟ್ ಹೇಳಿದೆ.
ಭಯೋತ್ಪಾದಕ ಸಂಘಟನೆಗೆ ಸೇರಲು ಜನರನ್ನು ಪ್ರೇರೇಪಿಸುವಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು.
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಭಟ್ಕಳ್ ದೊಡ್ಡ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ಮೂಲದ ಸಹಚರರು ಮತ್ತು ಸ್ಲೀಪರ್ ಸೆಲ್ಗಳ ಸಕ್ರಿಯ ನೆರವು ಮತ್ತು ಬೆಂಬಲದೊಂದಿಗೆ ಭಾರತದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ದೆಹಲಿಯಲ್ಲಿ ಬಾಂಬ್ ಸ್ಫೋಟಗಳ ಮೂಲಕ ಭಯೋತ್ಪಾದಕ ಚಟುವಟಿಕೆಗಳ ಆಯೋಜಿಸಲು, ಹೊಸಬರನ್ನು ಪ್ರೇರೆಪಿಸಿ ಉಗ್ರ ಸಂಘಟನೆಗೆ ನೇಮಿಸಿಕೊಂಡರುವುದು ಈ ವೇಳೆ ತಿಳಿದುಬಂದಿದೆ.
ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರು ಮತ್ತು ಅದರ ಸಹ ಸಂಘಟನೆಗಳು ತಮ್ಮ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹವಾಲಾ ಮಾರ್ಗಗಳ ಮೂಲಕ ವಿದೇಶದಿಂದ ನಿಯಮಿತವಾಗಿ ಹಣವನ್ನು ಪಡೆಯುತ್ತಿದ್ದರು ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.
ಆರೋಪಿಗಳು ಬಾಬರಿ ಮಸೀದಿ, ಗುಜರಾತ್ ಗಲಭೆ ಮತ್ತು ಮುಸ್ಲಿಮರ ಮೇಲಿನ ಇತರ ಆಪಾದಿತ ದೌರ್ಜನ್ಯಗಳ ವಿಷಯವನ್ನು ಪ್ರಸ್ತಾಪಿಸಿ ಮುಸ್ಲಿಂ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳತ್ತ ಸೆಳೆಯಲು ಪ್ರಯತ್ನಿಸುತ್ತಿದ್ದರು ಎಂದು ಅದು ಹೇಳಿದೆ.