ಸೂರತ್, ಏ 03 (DaijiworldNews/MS): 2019ರ ಮಾನಹಾನಿ ಪ್ರಕರಣ ಸಂಬಂಧ ನೀಡಲಾಗಿದ್ದ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸೂರತ್ನ ಸೆಷನ್ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಮುಂದಿನ ವಿಚಾರಣೆಯನ್ನು ಮೇ. ೩ಕ್ಕೆ ನಿಗದಿ ಪಡಿಸಿದೆ. ಜೊತೆಗೆ ಅವರ ಜಾಮೀನನ್ನು ಏಪ್ರಿಲ್ 13 ರವರೆಗೆ ವಿಸ್ತರಿಸಿದೆ. ಸೂರತ್ ನ್ಯಾಯಾಲಯದ ತೀರ್ಪಿನ ನಂತರ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ ಹೇಳಿಕೆಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರ ಕಾನೂನು ತಂಡವು ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಜೊತೆಗೆ ರಾಹುಲ್ ಗಾಂಧಿ ಅವರು ನ್ಯಾಯಾಲಯಕ್ಕೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.
ಸೂರತ್ ಕೋರ್ಟ್ಗೆ ಆಗಮಿಸಿದ ರಾಹುಲ್ ಗಾಂಧಿ ಅವರ ಜತೆಗೆ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖ್ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು.
ಕೋರ್ಟ್ಗೆ ರಾಹುಲ್ ಗಾಂಧಿ ಅವರು ಸ್ವತಃ ಹಾಜರಾಗುವುದನ್ನು ಡ್ರಾಮಾ ಎಂದು ಬಿಜೆಪಿ ಟೀಕಿಸಿದೆ ಮತ್ತು ಇದೊಂದು ಬಾಲಿಶ ನಡವಳಿಕೆ ಎಂದು ಹೇಳಿದೆ.