ಬೆಂಗಳೂರು, ಏ 04 (DaijiworldNews/MS): ರಾಮನಗರದ ಕನಕಪುರದ ಸಾತನೂರಿನಲ್ಲಿ ಜಾನುವಾರು ವ್ಯಾಪಾರಿಯನ್ನು ಹತ್ಯೆಗೈದ ಆರೋಪಿಗಳನ್ನು ಇನ್ನೂ ಬಂಧಿಸಲಿಲ್ಲ ಎಂದು ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಜಾನುವಾರು ವ್ಯಾಪಾರಿ ಇದ್ರೀಷ್ ಪಾಷ ಸಾವು ಪ್ರಕರಣ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಾತನೂರಿನಲ್ಲಿ ಜಾನುವಾರು ವ್ಯಾಪಾರಿಯನ್ನು ಹತ್ಯೆಗೈದ ಕೊಲೆಗಡುಕನನ್ನು ಇನ್ನೂ ಬಂಧಿಸಲಿಲ್ಲ. ಆತ ರಾಜಾರೋಷವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮಾಡಿ ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುತ್ತಿದ್ದಾನೆ. ಒಬ್ಬ ಕೊಲೆ ಆರೋಪಿಯನ್ನು ಬಂಧಿಸಲಾಗಿಲ್ಲ ಅಂದರೆ ಏನರ್ಥ? ಆರಗ ಜ್ಞಾನೇಂದ್ರ ರಾಜ್ಯದಲ್ಲಿ ಗೃಹ ಇಲಾಖೆ ಸತ್ತು ಹೋಗಿದೆಯೇ’ ಎಂದು ಪ್ರಶ್ನಿಸಿದೆ. ‘ಜಾನುವಾರು ವ್ಯಾಪಾರಿಯನ್ನು ಕೊಲೆ ಮಾಡಿದ್ದೂ ಅಲ್ಲದೆ, ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಕೊಲೆಗಡುಕನ ಧೈರ್ಯದ ಹಿಂದಿನ ಕಾರಣವೇನು?, ಗೃಹಸಚಿವರು ಕೊಲೆ ಆರೋಪಿಯನ್ನು ತಮ್ಮದೇ ಮನೆಯಲ್ಲಿಟ್ಟುಕೊಂಡು ವಿಡಿಯೊ ಮೂಲಕ ಸಿದ್ದರಾಮಯ್ಯ ಅವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆಯೇ? ಆರಗ ಜ್ಞಾನೇಂದ್ರ ಕೊಲೆ ಆರೋಪಿಯ ರಕ್ಷಣೆಗೆ ನಿಂತಿದ್ದಾರೆಯೇ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.