ಬೆಂಗಳೂರು, ಏ 04 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಿಲ್ಲ ಎಂದು ನಾನು ಹೇಳಿಯೇ ಇಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿ ಎನ್ಡಿಟಿವಿ ವರದಿ ಮಾಡಿದ್ದು, ಈ ಹೇಳಿಕೆ ಕಾಂಗ್ರೆಸ್ನಲ್ಲಿ ತಲ್ಲಣ ಸೃಷ್ಟಿಸಿದ್ದು,ಭಾರೀ ಚರ್ಚೆಗೆ ಗ್ರಾಸವಾಗಿದೆ .ಹೀಗಾಗಿ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಇದಕ್ಕೆ ನವದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ. ಆದರೆ, ಹೈಕಮಾಂಡ್ ಅದಕ್ಕೆ ಸಮ್ಮತಿ ನೀಡುವುದಿಲ್ಲ ಎನ್ನುವ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. ಸಿಎಂ ಆಯ್ಕೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ, ನಾನು ಸಿಎಂ ಆಕಾಂಕ್ಷಿ ಮತ್ತು ಅವರು (ಡಿಕೆ ಶಿವಕುಮಾರ್) ಆಕಾಂಕ್ಷಿ ಎಂದು ನಾನು ಹೇಳಿದ್ದೇನೆ. ಆದರೆ, ಅವರು (ಮಾಧ್ಯಮಗಳು) ಹೇಳುತ್ತಿರುವುದು ಸುಳ್ಳು ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲೂ ಬರೆದುಕೊಂಡಿದ್ದಾರೆ.