ಹೊಸದೆಹಲಿ,ಮಾ26(AZM):ನರೇಂದ್ರ ಮೋದಿ ಸರಕಾರದ ಸಮಯದಲ್ಲೇ ಭಾರತದಿಂದ ಬೀಫ್ ರಫ್ತು ಪ್ರಮಾಣ ಏರಿಕೆಯಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ವಿಶ್ವದಲ್ಲೇ ಭಾರತವು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬೀಫ್ ರಫ್ತು ಮಾಡುವ ರಾಷ್ಟ್ರವಾಗಿ ಮಾರ್ಪಾಡಾಗಿದೆ. ಗೋಮಾಂಸ ನಿಷೇಧ ಆಗಿರುವುದರಿಂದಾಗಿ ಕೋಣ/ಎಮ್ಮೆ ಮಾಂಸ ರಫ್ತು ಏರಿಕೆಯಾಗಿದೆ.
ಮೋದಿ ಸರಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಬೀಫ್ ರಫ್ತಿನಲ್ಲಿ ಗಣನೀಯ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ಕೃಷಿ ಮತ್ತು ಸಂಸ್ಕರಿತ ಆಹಾರಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ)ದ ಅಂಕಿಅಂಶಗಳು ತೋರಿಸಿವೆ. 2013-14ರಲ್ಲಿ 13,65,643 ಮೆಟ್ರಿಕ್ ಟನ್.ಗಳಿದ್ದ ಬೀಫ್ ರಫ್ತು ಪ್ರಮಾಣ 2014-15ರಲ್ಲಿ 14,75,540 ಮೆಟ್ರಿಕ್ ಟನ್.ಗೇರಿತ್ತು. ಇದು ಕಳೆದ 10 ವರ್ಷಗಳಲ್ಲಿ ದಾಖಲೆ ರಫ್ತು ಪ್ರಮಾಣವಾಗಿತ್ತು. ಆದರೆ ಮರುವರ್ಷ,ಅಂದರೆ 2015-16ರಲ್ಲಿ ರಫ್ತು ಪ್ರಮಾಣದಲ್ಲಿ ಶೇ.11ರಷ್ಟು ಕುಸಿತವುಂಟಾಗಿತ್ತು.
ಬೀಫ್ ಸೇವಿಸಿದ್ದಕ್ಕಾಗಿ ವ್ಯಕ್ತಿಯನ್ನು ಹೊಡೆದು ಕೊಂದ ಮೊದಲ ಪ್ರಕರಣ ಬೆಳಕಿಗೆ ಬಂದಾಗ ಬೀಫ್ ರಫ್ತು ನಲ್ಲಿ ಕುಸಿತ ಕಂಡು ಬಂತು. ಉತ್ತರ ಪ್ರದೇಶದ ದಾದ್ರಿ ಜಿಲ್ಲೆಯ ಬಿಸಾರಾ ಗ್ರಾಮದಲ್ಲಿ ಗೋಮಾಂಸ ಸೇವನೆ ಮಾಡಿದ್ದಾರೆ ಎಂಬ ಆರೋಪದಲ್ಲಿ 2015 ಸೆಪ್ಟಂಬರ್ ತಿಂಗಳಲ್ಲಿ ಮೊಹಮ್ಮದ್ ಅಕ್ಲಾಕ್ ಎಂಬಾತನನ್ನು ಜನರ ಗುಂಪೊಂದು ಹೊಡೆದು ಕೊಂದಿತ್ತು.
ಇದಾದ ನಂತರದ ಎರಡು ವರ್ಷಗಳಲ್ಲಿ ಬೀಫ್ ರಫ್ತು ಗಣನೀಯವಾಗಿ ಏರಿಕೆಯಾಯಿತು. 2016-17ರಲ್ಲಿ ಬೀಫ್ ರಫ್ತು 13,30,013 ಮೆಟ್ರಿಕ್ ಟನ್ ಆಗಿತ್ತು.ಅಂದರೆ 2015-16ಕ್ಕಿಂತ ಶೇ. 1.2 ಏರಿಕೆಯಾಗಿದೆ.
ಭಾರತ ಜಗತ್ತಿನಲ್ಲಿ ಅತೀ ಹೆಚ್ಚು ಬೀಫ್ ರಫ್ತು ಮಾಡುವ ದೇಶವಾಗಿದೆ.. ಪ್ರತಿ ವರ್ಷ ಇಲ್ಲಿಂದ 4 ಬಿಲಿಯನ್ ಡಾಲರ್ (₹400 ಕೋಟಿ) ಮೌಲ್ಯದ ಕೋಣದ ಮಾಂಸ ರಫ್ತಾಗುತ್ತದೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ಹೇಳಿದೆ.