ಸಾಗರ, ಮೇ 12 (DaijiworldNews/MS): ಸಾಗರ ವಿಧಾನಸಭೆ ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಸೈಯದ್ ಜಾಕೀರ್ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಸಾಗರ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಸೈಯದ್ ಜಾಕೀರ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಅವರು ನಾಮಪತ್ರವನ್ನು ಸಹ ಸಲ್ಲಿಕೆ ಮಾಡಿದ್ದರು. ಆದರೆ ಮತದಾನದ ಹಿಂದಿನ ದಿನ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.
ಚುನಾವಣಾ ಕಣದಿಂದ ಹಿಂದೆ ಸರಿಯಲು ಆರೋಗ್ಯ ಕಾರಣ ಎಂದು ಸೈಯದ್ ಜಾಕೀರ್ ಹೇಳಿದ್ದರು. ಸೋಮವಾರ ಚುನಾವಣಾ ಕಣದಿಂದ ಹಿಂದೆ ಸರಿಯುವ ತೀರ್ಮಾನ ಪ್ರಕಟಿಸಿದ ಅವರು, ಬುಧವಾರ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ನ ಬೇಳೂರು ಗೋಪಾಲಕೃಷ್ಣಗೆ ಬೆಂಬಲ ಘೋಷಣೆ ಮಾಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಕಾರಣಕ್ಕೆ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.ಸಾಗರ ತಾಲೂಕು ಜೆಡಿಎಸ್ ಅಧ್ಯಕ್ಷ ಕನ್ನಪ್ಪ ಬೆಳಲಮಕ್ಕಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ