ಬೆಂಗಳೂರು, ಮೇ 12 (DaijiworldNews/SM): ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳೋದಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಮತದಾರದ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.
ನಾಳೆ ಮಧ್ಯಾಹ್ನ 12 ಗಂಟೆಗೆ ಹೊತ್ತಿಗೆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ. ಸಂಜೆ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ. ಹಲವು ಸುತ್ತುಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು, ಅಂಚೆ ಮತಗಳ ಲೆಕ್ಕ ಹಾಕಲಾಗುತ್ತದೆ.
ಮತ ಎಣಿಕೆ ಕೇಂದ್ರಗಳು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 34 ಕೇಂದ್ರಗಳಲ್ಲಿ ಏಕಕಾಲಕ್ಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಯಂತ್ರಗಳನ್ನು ಭದ್ರವಾಗಿ ಇಡಲಾಗಿದ್ದು, ಸ್ಟ್ರಾಂಗ್ ರೂಂಗಳಲ್ಲಿ 3 ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.