ಹಾಸನ,ಮಾ 28 (MSP): ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರ ಆಪ್ತರ ನಿವಾಸದ ಮೇಲೆ ಮಾ.28 ರ ಗುರುವಾರ ಆದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆದಿದ್ದು, ಅಶ್ವಥ್ ನಾರಾಯಣ್ ರೆಡ್ಡಿ, ರಾಯಗೌಡ ಸೇರಿದಂತೆ ಒಟ್ಟು ಮೂವರ ಮನೆಗಳ ಮೇಲೆ ದಾಳಿ ನಡೆದಿದೆ.
ಚನ್ನರಾಯಪಟ್ಟಣ ಹಾಸನದಲ್ಲಿ ಈ ದಾಳಿ ನಡೆದಿದ್ದು ಇದರೊಂದಿಗೆ ಹಾಸನದಲ್ಲಿರುವ ಸಚಿವ ರೇವಣ್ಣ ಅವರ ಇಲಾಖೆಗೆ ಸೇರಿದ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಎರಡು ಇನ್ನೋವಾ ಕಾರಿನಲ್ಲಿ 8 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇದಲ್ಲದೆ ಇನ್ನೊಂದೆಡೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮೈಸೂರು ಹಾಗೂ ಮಂಡ್ಯ ನಗರದಲ್ಲಿರುವ ಮನೆ ಮೇಲೆ ಆದಾಯ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳು ಮಾ.28 ರ ಗುರುವಾರ ಬೆಳ್ಳಂಬೆಳ್ಳಗೆ ದಾಳಿ ನಡೆಸಿದ್ದಾರೆ.
ಮುಂಜಾನೆ ಸುಮಾರು 5.30ರ ಪುಟ್ಟರಾಜು ಅವರ ವ್ಯವಹಾರಗಳನ್ನು ನೋಡಿಕೊಳ್ಳವ ಅವರ ಅಣ್ಣನ ಮಗ ಹಾಗೂ ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಾಲ್ಕು ಕಾರುಗಳಲ್ಲಿ ಬಂದಿರುವ ಐಟಿ ಅಧಿಕಾರಿಗಳು ಸಿ.ಆರ್.ಪಿ.ಎಫ್. ಸಿಬ್ಬಂದಿಯ ಭದ್ರತೆಯಲ್ಲಿ ದಾಳಿ ನಡೆಸಿದ್ದಾರೆ.