ಚಿಕ್ಕಮಗಳೂರು, ಮೇ 13 (DaijiworldNews/HR): ಬಿಜೆಪಿಯ ಭದ್ರಕೋಟೆ ಚಿಕ್ಕಮಗಳೂರು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಬಿಜೆಪಿಯ ಸಿ.ಟಿ.ರವಿಗೆ ಹೀನಾಯ ಸೋಲಾಗಿದೆ.
ಹಿಂದಿನ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಮತ್ತು ಕಡೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಮ್ಮ ಆಪ್ತನಾಗಿದ್ದ ಎಚ್.ಡಿ.ತಮ್ಮಯ್ಯ ಅವರಿಂದ ಸೋಲಿಸಿದ್ದು, ಸಿ.ಟಿ.ರವಿಗೆ ಹೀನಾಯ ಸೋಲಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ತಮ್ಮಯ್ಯ ಅವರು ಬಿಜೆಪಿಯ ಭದ್ರ ಕೋಟೆಯಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಿಸಿದಾಗ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಆದರೆ ಇದರ ನಡುವೆಯೇ ತಮ್ಮಯ್ಯ ಗೆದ್ದು ಬೀಗಿದ್ದಾರೆ.
ತಮ್ಮಯ್ಯ 60101 ಮತಗಳನ್ನು ಪಡೆದಿದ್ದು, ಸಿ.ಟಿ.ರವಿ 52201 ಮತಗಳನ್ನು ಪಡೆದಿದ್ದಾರೆ. 2018ರಲ್ಲಿ ಸಿ.ಟಿ.ರವಿ 26,314 ಮತಗಳ ಅಂತರದಿಂದ ಗೆದ್ದಿದ್ದರು.
ಇನ್ನು ಎಚ್.ಡಿ.ತಮ್ಮಯ್ಯ ಅವರ ಗೆಲುವಿಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿರುವ ಇವರು, ಯುವ ಉದ್ಯಮಿ, ಪನಾಮ ನಿಗಮದ ಸಿಇಒ ಮತ್ತು ಅಧ್ಯಕ್ಷರೂ ಆಗಿರುವ ಮಂಗಳೂರಿನ ವಿವೇಕ್ ರಾಜ್ ಪೂಜಾರಿ ಶ್ರಮಿಸಿದ್ದು, ಅವರ ಮತ್ತು ಕಾರ್ಯಕರ್ತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.