ಬೆಂಗಳೂರು, ಮೇ 14 (DaijiworldNews/SM): ರಾಜ್ಯದಲ್ಲಿ ಸರಕಾರ ರಚನೆಗೆ ಕಾಂಗ್ರೆಸ್ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ. ಈ ನಡುವೆ ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಇದರಲ್ಲಿ ಫೈನಲ್ ನಿರ್ಧಾರಕ್ಕೆ ಬರಲಾಗದ ಹಿನ್ನೆಲೆಯಲ್ಲಿ ಆಯ್ಕೆ ವಿಚಾರವನ್ನು ನಾಳೆಗೆ ಮುಂದೂಡಲಾಗಿದೆ.
ಈ ನಡುವೆ ರಾಜ್ಯದಲ್ಲಿ ಅರ್ಧ ಅವಧಿಗೆ ಇಬ್ಬರಿಗೂ ಅವಕಾಶವನ್ನು ಮಾಡಿಕೊಡಲಾಗುವುದೆಂದು ಹೈಕಮಾಂಡ್ ವೀಕ್ಷಕರು ಸಲಹೆ ನೀಡಿದ್ದು, ಇದನ್ನು ಡಿಕೆಶಿ ತಿರಸ್ಕರಿಸಿದ್ದಾರೆ. ಇಷ್ಟೇ ಅಲ್ಲದೆ, ಶಾಸಕರ ಓಟಿಂಗ್ ಮೂಲಕ ಸಿಎಂ ಆಯ್ಕೆಗೂ ಡಿಕೆಶಿ ನಿರಾಕರಿಸಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಬುಲಾವು ನೀಡುತ್ತೇ ಅವರನ್ನೇ ಒಮ್ಮತದಿಂದ ಒಪ್ಪಿಕೊಳ್ಳುವ ನಿರ್ಧಾರಕ್ಕೆ ಪಕ್ಷ ಬಂದಿದೆ. ಶಾಸಕಾಂಗ ಸಭೆ ಬಳಿಕ, ಸಿಎಂ ಆಯ್ಕೆ ಸಂಬಂಧ ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಲು ವೀಕ್ಷಕರು ಮುಂದಾಗಿದ್ದಾರೆ.
ನಾಳೆಯ ದಿನ ದೆಹಲಿಯಲ್ಲಿ ಈ ಕುರಿತಂತೆ ಸವಿಸ್ತಾರವಾದ ಚರ್ಚೆ ನಡೆಸಲು ಹೈಕಮಾಂಡ್ ನಿರ್ಧರಿಸಿದ್ದು, ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ನಿರ್ಧಾರಕ್ಕೆ ಬರಲಿದ್ದಾರೆ.