ಬೆಂಗಳೂರು, ಮೇ 16 (DaijiworldNews/MS): ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಸಂಪೂರ್ಣ ಇಕ್ಕಟ್ಟಿನಲ್ಲಿ ಸಿಲುಕಿದ್ದು , ಭಿನ್ನಪತ ಸ್ಪೋಟಗೊಳ್ಳದ ಹಾಗೇ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ತಮ್ಮನ್ನು ಬಿಟ್ಟು ಬೇರೆಯವರಿಗೆ ಪಟ್ಟ ಕಟ್ಟುವಂತಿಲ್ಲ ಎಂಬ ಹಠದಲ್ಲಿ ವರಿಷ್ಟರ ಮನವೊಲಿಸಲು ಸಿದ್ದರಾಮಯ್ಯ ದೆಹಲಿ ಸೇರಿಕೊಂಡಿದ್ದಾರೆ.
ನಿನ್ನೆ ಸಂಜೆಯವರೆಗೆ ಬೆಂಗಳೂರಿನಲ್ಲಿ ಉಳಿದುಕೊಂಡು ಅಸಹಕಾರ ಬಾವುಟ ಹಾರಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಕೆಂಪೇಗೌಡ ಏರ್ಪೋರ್ಟ್ನಿಂದ ದೆಹಲಿಗೆ ತೆರಳಲಿದ್ದಾರೆ.
ನಿನ್ನೆ ಮಾಧ್ಯಮದೊಂದಿಗೆ ಜೊತೆ ಮಾತನಾಡಿದ ಶಿವಕುಮಾರ್, ಆರೋಗ್ಯ ಸರಿಯಿಲ್ಲದ ಕಾರಣ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಅಲ್ಲದೆ, ಸೋನಿಯಾ ಗಾಂಧಿ ಅವರು ಶಿಮ್ಲಾದಿಂದ ಮಂಗಳವಾರ ದೆಹಲಿಗೆ ವಾಪಸಾಗುತ್ತಾರೆ. ಸೋನಿಯಾಗಾಂಧಿ ಅವರು ಬರಲಿ ಎಂದು ನಾನು ಕಾಯುತ್ತಿದ್ದೆ. ಅವರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.
ಸೋನಿಯಾಗಾಂಧಿಯವರಿಗೆ ನಾನು ಕೊಟ್ಟ ಮಾತು ಈಡೇರಿಸಿದ್ದು, ನಾನು ಪಕ್ಷ ನಿಷ್ಟ. ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ ನಾನು ಬ್ಲ್ಯಾಕ್ಮೇಲ್ ಮಾಡುವುದಿಲ್ಲ , ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಹಿಂದೆ ಯಾರಿದ್ದಾರೆ ಎಂಬುದನ್ನು ಪಕ್ಷದ ನಾಯಕತ್ವ ಅರಿತುಕೊಳ್ಳಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಆಯ್ಕೆಗೆ ಸ್ಪಷ್ಟ ವಿರೋಧ ತೋರಿದ್ದಾರೆ.