ಬೆಂಗಳೂರು, ಮೇ 16 (DaijiworldNews/SM): ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗೆ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ, ಡಾ. ಪರಮೇಶ್ವರ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಅವರೂ ಕೂಡ ಸಿಎಂ ಆಕಾಂಕ್ಷಿ ಎಂಬುವುದು ಸಾಬೀತಾಗಿದೆ.
ನಾನೂ ಸಿಎಂ ಆಗಲು ಸಿದ್ಧ ಎಂದು ಜಿ ಪರಮೇಶ್ವರ ಹೇಳಿರುವುದಾಗಿ ವರದಿಯಾಗಿದೆ. ಮುಖ್ಯಮಂತ್ರಿ ಆಗಲು ಸಿದ್ಧನಿದ್ದೇನೆ. ನಾನೂ 50 ಶಾಸಕರನ್ನು ಕರೆದೊಯ್ಯಬಹುದು. ಆದರೆ, ಎಂದಿಗೂ ಲಾಬಿ ಮಾಡುವುದಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ. ಈ ಮೂಲಕ, ತಮ್ಮನ್ನು ಮುಖ್ಯಮಂತ್ರಿ ಮಾಡಿದರೆ ಸರ್ಕಾರ ಮುನ್ನಡೆಸಲು ಸಿದ್ಧ ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಮಾಜಿ ಸಚಿವ ಡಾ. ಪರಮೇಶ್ವರ್ ಅವರು ಹೇಳಿದ್ದಾರೆ.
ನನಗೆ ಹೈಕಮಾಂಡ್ ಮೇಲೆ ನಂಬಿಕೆ ಇದ್ದು, ನನಗೆ ಕೆಲವು ತತ್ವಗಳಿವೆ. ನಾನೂ ಸಹ 50 ಶಾಸಕರನ್ನು ಕರೆದುಕೊಂಡು ಹೋಗಿ ಗುಲ್ಲೆಬ್ಬಿಸಬಹುದು. ಆದರೆ ನನಗೆ ಪಕ್ಷದ ಶಿಸ್ತು ಹೆಚ್ಚು ಮುಖ್ಯ ಎಂದು ಪರಮೇಶ್ವರ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಹೈಕಮಾಂಡ್ ತೀರ್ಮಾನ ಕೈಗೊಂಡು ಸರ್ಕಾರ ಮುನ್ನಡೆಸಲು ಹೇಳಿದರೆ, ನಾನು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ನಾನು ಅವಕಾಶವನ್ನು ನಿರಾಕರಿಸುತ್ತೇನೆ ಎಂದಲ್ಲ, ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂಬುದು ಹೈಕಮಾಂಡ್ಗೆ ತಿಳಿದಿದೆ. ನಾನೂ ಸಹ ಪಕ್ಷಕ್ಕೆ ಸಹಾಯ ಮಾಡಿದ್ದೇನೆ. ಅಧಿಕಾರದ ವಿಚಾರದಲ್ಲಿ ಹೇಳುವುದಾದರೆ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಹೀಗಾಗಿ ಲಾಬಿ ಮಾಡುವ ಬದಲು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಎಂದ ಮಾತ್ರಕ್ಕೆ ನಾನು ಅನರ್ಹ ಎಂದು ಅರ್ಥವಲ್ಲ ಎಂದೂ ಅವರು ಹೇಳಿದ್ದಾರೆ.