ಬೆಂಗಳೂರು, ಮೇ 18 (DaijiworldNews/MS): ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆಗೆ ಕಾಂಗ್ರೆಸ್ ಪಾಳೆಯದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಕಸರತ್ತಿಗೆ ತೆರೆಬಿದ್ದಿದೆ. ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 2ನೇ ಸಲ ಸಿಎಂ ಪಟ್ಟ ಅಲಂಕರಿಸುವ ಅದೃಷ್ಟ ಪಡೆದ ಸಿದ್ದರಾಮಯ್ಯ ಅವರಿಗೆ ಈ ಬಾರಿ ಚುನಾವಣೆಯ ಹಾದಿ ಕಠಿಣವಾಗಿತ್ತು. ಎಲ್ಲಾ ಸವಾಲುಗಳನ್ನು ಗೆದ್ದು ಬೀಗಿರುವ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದರು. ಜನತಾ ಪರಿವಾರದಿಂದ ಬಂದ ಸಿದ್ದರಾಮಯ್ಯ ರಾಜ್ಯದಲ್ಲಿ 2013ರಿಂದ 18ರವರೆಗೆ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಆಗಿ ಅಧಿಕಾರ ಚಲಾಯಿಸಿದ್ದಾರೆ. ಹೀಗಾಗಿ, ಇದು ಸಿದ್ದು ಪಾಲಿಗೆ 2ನೇ ಬಾರಿಗೆ ಸಿಎಂ ಖುರ್ಚಿ ಅಲಂಕರಿಸುವ ಅವಕಾಶ ಬಂದಿದೆ. 13 ಬಾರಿ ಬಜೆಟ್ ಮಂಡಿಸಿರುವ ಸಿದ್ದು ಸಿಎಂ ಆಗಿ ಶಾದಿ ಭಾಗ್ಯ, ಅನ್ನ ಭಾಗ್ಯ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಅವಿವಾಹಿತರಿಗೆ ಮೈತ್ರಿ ಮತ್ತು ಮನಸ್ವಿನಿಯಂಥ ವಿಶೇಷ ಯೋಜನೆ ಜಾರಿಗೊಳಿಸಿದ್ದರು. ರೈತರಿಗಾಗಿ ಕೃಷಿ ಭಾಗ್ಯ, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿದ್ದರು.
ಸಿದ್ದರಾಮಯ್ಯ ನಡೆದುಬಂದ ಹಾದಿ
ಸಿದ್ದರಾಮಯ್ಯ 1948ರಲ್ಲಿ ಮೈಸೂರಿನ ವರುಣಾ ಹೋಬಳಿ ಬಳಿಯ ಸಿದ್ದರಾಮನ ಹುಂಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ ಹಾಗೂ ತಾಯಿ ಬೋರಮ್ಮ.
ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು. ರಾಜ್ಯ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು ಭಾರತೀಯ ಲೋಕದಳ ಎಂಬ ಅಂದಿನ ರಾಜಕೀಯ ಪಕ್ಷದಿಂದ. 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು.
ಜನತಾ ಪಕ್ಷ ಇಬ್ಭಾಗದ ಬಳಿಕ ಜನತಾದಳ ಸೇರ್ಪಡೆಯಾದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬರದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಧರಂಸಿಂಗ್ ಮುಖ್ಯಮಂತ್ರಿಯಾದರೆ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಜೆಡಿಎಸ್ನಲ್ಲಿ ದೇವೇಗೌಡರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಪ್ರಬಲನಾಯಕನಾಗಿದ್ದರು. ಆದರೆ 2006ರಲ್ಲಿ ದೇವೇಗೌಡರು ಸಿದ್ದರಾಮಯ್ಯರನ್ನು ಪಕ್ಷದಿಂದಲೇ ಉಚ್ಛಾಟಿಸಿದರು.
ಬಳಿಕ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ 2014ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2014ರಿಂದ 2018ರವರೆಗೆ ಪೂರ್ಣಾವಧಿ ಸಿಎಂ ಆಗಿ ಕಾರ್ಯ ನಿರ್ವಹಿಸಿದರು.