ನವದೆಹಲಿ, ಮೇ 18 (DaijiworldNews/MS): ಕಂಬಳ ಹಾಗೂ ಜಲ್ಲಿಕಟ್ಟು ಸ್ಪರ್ಧೆಗೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಇನ್ನುಮುಂದೆ ಕರ್ನಾಟಕದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವು ಯಾವುದೇ ಅಡೆ-ತಡೆಗಳಿಲ್ಲದೆ ನಡೆಯಲಿದೆ.
ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡುವ ಕಾನೂನುಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ನ ಸಂವಿಧಾನಪೀಠ ವಜಾಗೊಳಿಸಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ತಮಿಳುನಾಡು ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠ ಗುರುವಾರ ಎತ್ತಿಹಿಡಿದಿದಿದ್ದು ಆ ಮೂಲಕ ಜಲ್ಲಿಕಟ್ಟು , ಕಂಬಳ ಎತ್ತಿನಬಂಡಿ ಒಟ ಗಳಿಗೆ ಅನುಮತಿ ನೀಡಿದೆ. . ತಮ್ಮ ನಿರ್ಧಾರವು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಂಬಳ ಹಾಗೂ ಗೂಳಿ ಓಟದ ಮೇಲಿನ ಕಾನೂನುಗಳಿಗೆ ಅನ್ವಯಿಸುತ್ತದೆ ಹಾಗೂ ಈ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪೀಠವು ಹೇಳಿದೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರ ಸಂವಿಧಾನ ಪೀಠವು, ಜಾನುವಾರಗಳ ಮೇಲಿನ ದೌರ್ಜನ್ಯ ತಡೆಗೆ ಮತ್ತು ಕ್ರೀಡೆಯನ್ನು ಮುಂದುವರಿಸಲು ಅನುವು ಮಾಡಿಕೊಡಲು ತಿದ್ದುಪಡಿಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿನ ಬಂಡಿ ಓಟ ಅನ್ನು ಅನುಮತಿಸುವ ಕಾನೂನನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಕಾನೂನುಗಳು 51A(g) ಮತ್ತು 51A(h) ಅನ್ನು ಉಲ್ಲಂಘಿಸುವುದಿಲ್ಲ ಮತ್ತು ಹೀಗಾಗಿ ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.