ಇಂದೋರ್,ಮೇ18(DaijiworldNews/KH):ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದ ವಿವಾಹ ಸಮಾರಂಭದ ವೇಳೆ ವಧು-ವರ ವಿಷ ಸೇವಿಸಿರುವ ಘಟನೆ ವರದಿಯಾಗಿದೆ.
ಮೇ.16 ರಂದು ಮಂಗಳವಾರ ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ವಧು ವರರ ನಡುವೆ ಜಗಳ ಉಂಟಾಗಿತ್ತು. ಇನ್ನು ಹಾರ ಬದಲಾಯಿಸಿ ತಾಳಿ ಕಟ್ಟಬೇಕು ಎನ್ನುವಾಗಲೇ ವರ ಮದುವೆ ವೇದಿಕೆಯ ಬದಿಗೆ ಹೋಗಿ ವಿಷ ಸೇವಿಸಿ ಆ ಬಳಿಕ ಮದುವೆ ವೇದಿಕೆಯಲ್ಲಿ ತಾನು ವಿಷ ಸೇವಿಸಿ ಬಂದಿದ್ದೇನೆ ಎಂದು ವರ ದೀಪಕ್ ಅಹಿರ್ವಾರ್ ವಧು ನಿಶಾಳಿಗೆ ಹೇಳಿದ್ದಾನೆ.
ಇನ್ನು ವರನ ಮಾತನ್ನು ಕೇಳಿ ವಧು ಕೂಡ ವಿಷ ಸೇವಿಸಿದ್ದು, ವರ-ವಧುವನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ 21 ವರ್ಷದ ವರ ಮೃತಪಟ್ಟಿದ್ದು, ವಧು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.
ಯುವತಿ ಯುವಕನನ್ನು ಮದುವೆಯಾಗಲು ಒತ್ತಡ ಹೇರುತ್ತಿದ್ದು, ಹುಡುಗನಿಗೆ ಇನ್ನು ಚಿಕ್ಕ ವಯಸ್ಸು ಆತ ಸ್ವಲ್ಪ ವೃತ್ತಿಜೀವನದ ಬಗ್ಗೆ ಚಿಂತನೆ ಮಾಡಿಕೊಳ್ಳಬೇಕು ಎಂದು ಹೇಳಿ ಎರಡು ವರ್ಷ ಕಾಲಾವಕಾಶ ಕೋರಿದಾಗ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೇ ಕಾರಣದಿಂದ ಮದುವೆ ಬೇಗ ಮಾಡಲು ತೀರ್ಮಾನ ಮಾಡಿದ್ದೆವು ಎಂದು ವರನ ಕುಟುಂಬ ಸದಸ್ಯರು ಹೇಳಿದ್ದಾರೆ.