ಬೆಂಗಳೂರು, ಮೇ 20 (DaijiworldNews/MS):ರಾಜ್ಯದ ನೂತನ ಸಚಿವರಾಗಿ ಜಮೀರ್ ಅಹ್ಮದ್ ಇಂಗ್ಲೀಷ್ ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
"ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು. ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಕ್ಕೆ ಬಂದು ಇಷ್ಟು ವರ್ಷಗಳಾದರೂ ಕನ್ನಡ ಕಲಿಯದಿರುವುದು ಎಷ್ಟು ಸರಿ?" ಎಂದು ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಟೀಕಿಸಿದ್ದಾರೆ.
ಕರ್ನಾಟಕಕ್ಕೆ ಬರುವ ರಾಷ್ಟ್ರೀಯ ನಾಯಕರೇ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತಿರುವಾಗ ಈ ನಾಡಿನಲ್ಲೇ ಹುಟ್ಟಿರೋ ಜಮೀರ್ ಅಹಮದ್ ಖಾನ್ ಅವರೇ ಇಷ್ಟು ವರ್ಷದಿಂದ ಇಲ್ಲೇ ಇದ್ದು ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡೋಲ್ಲ ಅಂದ್ರೆ ನಿಮಗೇನು ಹೇಳೋದು.ಮೊದಲು ಕನ್ನಡ ಮಿಕ್ಕಿದ್ದು ಆಮೇಲೆ.
ನಿಮ್ಮ ಈ ನಡೆಗೆ ನಮ್ಮ ವಿರೋಧ ಇದೆ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹೇಳಿದ್ದಾರೆ.
ಇಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿ ಜಮೀರ್ ಅಹ್ಮದ್ ಇಂಗ್ಲೀಷ್ ಭಾಷೆಯಲ್ಲಿ ಅಲ್ಲಾಹ್ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ, ಡಾ.ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ ಹಾಗೂ ಉಳಿದ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.