ತುಮಕೂರು, ಮೇ 23(DaijiworldNews/MS): ತುಮಕೂರಿನಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ಎಚ್ಎಎಲ್ ಸೇರಿ ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಲೈಸೆನ್ಸ್ ರದ್ದುಗೊಳಿಸುವುದಾಗಿ ಸಚಿವ ಪರಮೇಶ್ವರ್ ಎಚ್ಚರಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿ, ಖಾಸಗಿ ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಆದೇಶವಿದೆ. ಆದರೆ ಕಂಪೆನಿಗಳು ಕೆಲಸ ನೀಡಲು ಹಿಂದೇಟು ಹಾಕುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇಂಥಹ ಕಂಪೆನಿಗಳ ಪಟ್ಟಿ ಮಾಡಿ ಲೈಸೆನ್ಸ್ ರದ್ದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
2023 ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಆರಿಸಿ ಬಂದು ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಅಲ್ಲದೇ ಸ್ಥಳೀಯ ಯುವಕರು ಉದ್ಯೋಗ ದೊರೆಯುತ್ತಿಲ್ಲ ಎಂಬ ಆತಂಕ ಪಡಬಾರದು ಎಂಬ ಭರವಸೆಯನ್ನು ನೀಡಿ ಇದೇ ವೇಳೆ ನಿರುದ್ಯೋಗಿ ಯುವಕರಿಗೆ ಧೈರ್ಯ ತುಂಬಿದ್ದಾರೆ.