ಬೆಂಗಳೂರು, ಮೇ 25 (DaijiworldNews/SM): ಕಾಂಗ್ರೆಸ್ ಸರ್ಕಾರದ ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ ಮಾಡುವಂತೆ ಜೆಡಿಎಸ್ ಮುಖಂಡರಿಗೆ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ನಗರದಲ್ಲಿ ಗುರುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರಕಾರ ಈಗ ಷರತ್ತು ಅನ್ವಯ ಅನ್ನುತ್ತಿದೆ. ನಂಗೂ ಫ್ರೀ ನಿಂಗೂ ಫ್ರೀ ಎಂದವರು ಈಗ ಕಂಡಿಷನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನು, ಡಿಕೆಶಿ ಹೇಳಿದ್ದೇನು? ಖರ್ಗೆ ಹೇಳಿದ್ದೇನು? ಇದನ್ನೇ ನಾವು ಜನರ ಮುಂದೆ ಇಡಬೇಕು. ಈ ಬಗ್ಗೆಯೇ ಆಂದೋಲನವನ್ನೇ ಮಾಡಬೇಕು. ಜನರ ಜತೆ ನಿಲ್ಲಬೇಕು. ಜನರನ್ನೇ ಆಂದೋಲನಕ್ಕೆ ಧುಮುಕುವಂತೆ ಮಾಡಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿತು. ಸುಳ್ಳು ಗ್ಯಾರಂಟಿಗಳು ಹಾಗೂ ಕೂಪನ್ ಗಳನ್ನು ಕೊಟ್ಟು ಜನರಿಗೆ ವಂಚಿಸಿ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್ ಕುತಂತ್ರದಿಂದ ಗೆದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಕುತಂತ್ರಗಾರಿಕೆ ಮಾಡಿದರು. ಅವರ ಪಕ್ಷದವರು ಒಂದು ಸಮುದಾಯವನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರು ಎಂದು ಟೀಕಾಪ್ರಹಾರ ನಡೆಸಿದರು.