ಬೆಂಗಳೂರು, ಮೇ 27(DaijiworldNews/MS): ಸಿದ್ದರಾಮಯ್ಯನವರ ಸಂಪುಟದಲ್ಲಿ ಈ ಬಾರಿ ಏಕೈಕ ಮಹಿಳೆಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಈ ಮಂತ್ರಿ ಸ್ಥಾನದ ಅವಕಾಶ ಒಲಿದು ಬಂದಿದ್ದು, ಅವರು ಎಂಎ ಪದವೀಧರಾಗಿದ್ದಾರೆ. ಜೊತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿದ್ದಾರೆ. ೨೦೧೮ರಲ್ಲಿ ಮೊದಲ ಬಾರಿಗೆ ಅವರು ಶಾಸಕಿಯಾಗಿ ಆಯ್ಕೆಗೊಂಡು ವಿಧಾನಸಭೆ ಪ್ರವೇಶಿಸಿದ್ದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಸಮರ್ಥ ಸೇವೆ ಸಲ್ಲಿಸಿದ ನಂತರ 2013 ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇದಾದ ನಂತರ 2014 ರ ಲೋಕಸಭಾ ಚುನಾವಣೆಯಲ್ಲೂ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಯ ಹೊಂದಿದ್ದರು. ಸೋಲುಗಳಿಂದ ಧೃತಿಗೆಡದೆ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮುಂದುವರೆಸಿದರು. ೨೦೧೮ರಲ್ಲಿ ಭರ್ಜರಿ ಜಯಗಳಿಸಿ ಶಾಸಕಿಯಾಗಿ ಆಯ್ಕೆಯಾದರು.