ಬೆಂಗಳೂರು, ಜೂ 01 (DaijiworldNews/SM): ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಕ್ಷಣ ಹಿಂದಿನ ಸರಕಾರದ ಯೋಜನೆಗಳಿಗೆ ಬ್ರೇಕ್ ಹಾಕಿದ್ದಲ್ಲದೆ, ಬಿಡುಗಡೆ ಮಾಡಿದ ಅನುದಾನಕ್ಕೆ ತಡೆಯೊಡ್ಡಿದೆ. ಈ ನಡುವೆ ಜನಪರ ಯೋಜನೆಗಳನ್ನು ಮುಂದುವರೆಸಿ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ ಜನಪರ ಯೋಜನೆಗಳಿಗೆ ಅನುದಾನ ಕಡಿತ ಮಾಡದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳ ಕುರಿತು ಚರ್ಚಿಸಲು ಮತ್ತು ಘೋಷಣೆ ಮಾಡಲು ಶುಕ್ರವಾರ ಮಹತ್ವದ ಸಂಪುಟ ಸಭೆ ನಡೆಸುತ್ತಿದೆ. ಇದಕ್ಕೂ ಮುನ್ನವೇ ಮಾಜಿ ಸಿಎಂ ಬೊಮ್ಮಾಯಿಯವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರಬರೆದಿದ್ದಾರೆ. ಹಾಗೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಹಿಂದಿನ ಸರಕಾರ ಜಾರಿಗೆ ತಂದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಿಂದಿನ ಸರಕಾರಗಳು ಜಾರಿಗೆ ತಂದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರೆಸುವುದು ನೂತನ ಸರಕಾರದ ಜವಾಬ್ದಾರಿಯಾಗಿದೆ. ಈ ಬಗ್ಗೆ ಸರಕಾರ ಬಹಿರಂಗ ಹೇಳಿಕೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ರೂ. ಅಗತ್ಯವಿದೆ. ಇದು ರಾಜ್ಯದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಬಾರದು. ಜನರಿಗೆ ಪರೋಕ್ಷವಾಗಿ ಹೊರೆ ಬೀಳಬಾರದು.ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಹಣಕಾಸು, ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿಯಂತಹ ಪ್ರಮುಖ ಕ್ಷೇತ್ರಗಳ ಬಗ್ಗೆ ಕಾಳಜಿ ವಹಿಸುವ ಅವಶ್ಯಕತೆಯಿದೆ ಮತ್ತು ಸರ್ಕಾರ ಮೂಲಸೌಕರ್ಯ ರೈತರು, ದಲಿತರು, ಬಡವರು ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಳನ್ನು ಸಹ ರಕ್ಷಿಸಬೇಕು ಎಂದು ಹೇಳಿದ್ದಾರೆ.