ಬೆಂಗಳೂರು, ಜೂ 02 (DaijiworldNews/MS): ಇಡೀ ರಾಜ್ಯಕ್ಕೆ ರಾಜ್ಯವೇ ಎದುರು ನೋಡುತ್ತಿರುವ ಕಾಂಗ್ರೆಸ್ ಗ್ಯಾರಂಟಿ ಘೋಷಣೆಗೆ ಕ್ಷಣಗಣನೇ ಶುರುವಾಗಿದೆ. ಶುಕ್ರವಾರ ಮಹತ್ವದ ಸಚಿವ ಸಂಪುಟ ನಡೆಯಲಿದ್ದು, ಉಚಿತ ಪ್ರಯಾಣ ಸೇರಿದಂತೆ 5 ಯೋಜನೆಗಳ ಅಧಿಕೃತ ಆರಂಭ ಕುರಿತು ಘೋಷಣೆ ಹೊರಬೀಳುವ ನಿರೀಕ್ಷೆಗಳಿವೆ.
ಇವತ್ತಿನ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ಅಂತಿಮ ಮುದ್ರೆ ಬೀಳಲಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಬಳಿಕ ಗ್ಯಾರಂಟಿ ಘೋಷಣೆಗೆ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಐದು ಗ್ಯಾರಂಟಿ ಜಾರಿ ಷರತ್ತು ಸಹಿತವೋ ರಹಿತವೋ ಎಂಬ ಕುತೂಹಲ ರಾಜ್ಯದ ಜನರಲ್ಲಿ ಸೃಷ್ಟಿಯಾಗಿದೆ.
ಕ್ಯಾಬಿನೆಟ್ ಸಭೆಯಲ್ಲಿ ವ್ಯಕ್ತವಾಗುವ ಉತ್ತಮ ಅನುಷ್ಠಾನದ ಐಡಿಯಾವನ್ನ ಜಾರಿ ಮಾಡುವ ಸಾಧ್ಯತೆಯಿದೆ. ಆದರೆ ಐದು ಗ್ಯಾರಂಟಿಗಳನ್ನು ಸರಕಾರ ಏಕಕಾಲಕ್ಕೆ ಜಾರಿ ಮಾಡುವ ಸಾಧ್ಯತೆ ಕಡಿಮೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
200 ಯುನಿಟ್ ಉಚಿತ ವಿದ್ಯುತ್ ಹಾಗೂ ಮನೆಯೊಡತಿಗೆ ಮಾಸಿಕ 2,000 ರೂ. ನೀಡುವ ಯೋಜನೆಗಳ ಜಾರಿಗಾಗಿ ನಿಯಮಾವಳಿ ಜಾರಿಯಾಗುವ ಸಾಧ್ಯತೆ ಇದೆ. ಇದಲ್ಲದೇ ಅನ್ನಭಾಗ್ಯ, ಗೃಹ ಜ್ಯೋತಿ ಮತ್ತು ಯುವನಿಧಿ ಯೋಜನೆಗಳನ್ನ ಘೋಷಣೆ ಮಾಡಿ ಬಳಿಕ ಉಳಿದ ಗೃಹ ಲಕ್ಷ್ಮೀ, ಮಹಿಳೆಯರ ಫ್ರೀ ಬಸ್ಪಾಸ್ ಗ್ಯಾರಂಟಿಗಳನ್ನ ಎರಡನೇ ಹಂತದಲ್ಲಿ ಘೋಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.