ಬಾಲಸೋರ್, ಜೂ 04 (DaijiworldNews/SM): ಒಡಿಶಾದ ಬಾಲಸೋರ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ತ್ರಿವಳಿ ರೈಲು ಅಪಘಾತವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರವಸೆ ನೀಡಿದ್ದಾರೆ.
ಇಂದು ಮಧ್ಯಾಹ್ನ ಭೀಕರ ರೈಲು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇದು ನೋವಿನ ಘಟನೆ. ಗಾಯಾಳುಗಳ ಚಿಕಿತ್ಸೆಗೆ ಸರ್ಕಾರ ಎಲ್ಲ ರೀತಿಯ ಸಹಾಯ ನೀಡುತ್ತದೆ. ಇದೊಂದು ಗಂಭೀರ ಘಟನೆಯಾಗಿದ್ದು, ಪ್ರತಿಯೊಂದು ಕೋನದಿಂದ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.
ತಪ್ಪಿತಸ್ಥರೆಂದು ಕಂಡುಬಂದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ರೈಲ್ವೆ ಇಲಾಖೆ ಹಳಿಗಳ ಪುನಶ್ಚೇತನಕ್ಕೆ ಶ್ರಮಿಸುತ್ತಿದೆ. ನಾನು ಗಾಯಗೊಂಡ ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ ಎಂದರು.
ಇದೇ ವೇಳೆ ರಾತ್ರಿಯಿಡೀ ಜನರನ್ನು ರಕ್ಷಿಸಲು ಸಹಾಯ ಮಾಡಿದ ಸ್ಥಳೀಯರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ರೈಲು ಅಪಘಾತ ಸಂತ್ರಸ್ತರಿಗೆ ನೀಡಿದ ಸಹಾಯಕ್ಕಾಗಿ ನಾನು ಸ್ಥಳೀಯ ಜನರಿಗೆ ಕೃತಜ್ಞನಾಗಿದ್ದೇನೆ ಎಂದರು.
ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಬಾಲಸೋರ್ ಆಗಮಿಸಿ, ಅಲ್ಲಿಂದ ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆದ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು.
ಪ್ರಧಾನಿ ಮೋದಿಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿಯಿಂದ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡರು.