ಬೆಂಗಳೂರು, ಜೂ. 4 (DaijiworldNews/SM): ಎಮ್ಮೆ, ಕೋಣಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು? ಎಂದಿರುವ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿಕೆ ಆಶ್ಚರ್ಯ ತಂದಿದೆ. ಯಾರ ಓಲೈಕೆಗಾಗಿ ಅವರು ಹೀಗೆ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಭಾನುವಾರ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಗೋವನ್ನು ಪೂಜಿಸುತ್ತೇವೆ. ಸಚಿವರಾದ ಕೆ.ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ?, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ? ಇಲ್ಲಾ ಹೈ ಕಮಾಂಡ್ ಮೆಚ್ಚಿಸಲೊ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಗೋಹತ್ಯೆ ನಿಷೇಧ ಪ್ರಥಮವಾಗಿ ಪ್ರತಿಪಾದಿಸಿದ್ದು ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರು. ಪೂಜ್ಯ ಮಹಾತ್ಮಾ ಗಾಂಧಿ ಪ್ರತಿಪಾದಿಸಿದ ಗೋಹತ್ಯೆ ನಿಷೇಧವನ್ನು 1960 ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಕಾನೂನು ತರಲಾಗಿದೆ ಎಂದರು.