ತಿರುವನಂತಪುರ, ಜೂ 08 (DaijiworldNews/MS): ಇಂದು ಕೇರಳಕ್ಕೆ ಮಾನ್ಸೂನ್ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಪ್ರತಿ ವರ್ಷ ಜೂನ್ 1 ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತಿದ್ದು, ಈ ವರ್ಷ 7 ದಿನ ತಡವಾಗಿ ಕೇರಳಕ್ಕೆ ಮುಂಗಾರು ಆಗಮಿಸಿದೆ.
ಇಂದು ಬೆಳಗ್ಗೆಯಿಂದಲೇ ಕೇರಳದ ಎಲ್ಲಾ ಭಾಗಗಳಲ್ಲಿ ಮಳೆ ಆರಂಭವಾಗಿದೆ. ಪ್ರತಿ ವರ್ಷವೂ ಜೂನ್ 1ರಂದು ಮುಂಗಾರು ಮಾರುತಗಳು ಕೇರಳಕ್ಕೆ ಆಗಮಿಸುತ್ತಿದ್ದವು ಅದಾದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಕೂಡ ಮಳೆ ಆರಂಭವಾಗುತ್ತಿತ್ತು. ಇದೀಗ ಮುಂಗಾರು ಒಂದು ವಾರ ತಡವಾಗಿದ್ದರೂ ಕೂಡ ಬಿಪರ್ಜಾಯ್ ಚಂಡಮಾರುತದಿಂದಾಗಿ ಮಳೆಯ ಪ್ರಭಾವ ಹೆಚ್ಚಿದೆ.
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45 ಕಿ.ಮೀ ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ತಮಿಳುನಾಡು, ಕರ್ನಾಟಕ, ಮತ್ತು ನೈಋತ್ಯ, ಮಧ್ಯ, ಈಶಾನ್ಯ ಬಂಗಾಳ ಕೊಲ್ಲಿ, ಈಶಾನ್ಯ ರಾಜ್ಯಗಳು ಮತ್ತು ಕೇರಳದ ಉಳಿದ ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ.