ಬೆಂಗಳೂರು, ಜೂ 08 (DaijiworldNews/SM): ಕಾಂಗ್ರೆಸ್ನಲ್ಲಿದ್ದಾಗ 3 ಬಾರಿ ಗೆದ್ದಿದ್ದೇನೆ. ಬಿಜೆಪಿಗೆ ಬಂದು 2 ಬಾರಿ ಸೋತೆ. ಈ ಬಾರಿಯ ಚುನಾವಣೆಯ ಸೋಲಿಗೆ ಸುಧಾಕರ್ ಕಾರಣ ಎಂದು ಪರಜಿತ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಮಾತಿಗೆ ಗೌರವ ನೀಡಿ ನಾನು ಬಿಜೆಪಿ ಸೇರಿದ್ದೆ. ಬಿಜೆಪಿ ಸೇರಿದ ನಂತರ 2 ಬಾರಿ ಸ್ಪರ್ಧಿಸಿ 2 ಬಾರಿಯೂ ಸೋತಿದ್ದೇನೆ ಎಂದರು.
ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಡಾ. ಸುಧಾಕರ್ಗೆ ಉಸ್ತುವಾರಿ ನೀಡಿದರು. ಆದರೆ, ಈ ಚುನಾವಣೆಯಲ್ಲಿ ಆತನೂ ಸೋತ, ನಮ್ಮನ್ನೂ ಸೋಲಿಸಿದ. ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್ ನಿಭಾಯಿಸಲಿಲ್ಲ. ನಾನು ಹಣ, ಅಧಿಕಾರದ ಆಮಿಷಕ್ಕೆ ಬಿಜೆಪಿಗೆ ಬಂದವನಲ್ಲ. ನನ್ನ ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಿಗೆ ಸುಧಾಕರ್ ಕಾರಣ ಎಂದು ವಾಗ್ದಾಳಿ ಮಾಡಿದರು.
40% ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಿಲ್ಲ. ನಾವು ಕೇವಲ ಸಿದ್ದರಾಮಯ್ಯಗೆ ಅಷ್ಟೇ ಬೈದೆವು. ನಮ್ಮಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸರಿಯಾಗಿ ಆರೋಪಕ್ಕೆ ತಿರುಗೇಟು ಕೊಟ್ಟಿಲ್ಲ. ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕೊಡುವುದನ್ನು ಕಡಿಮೆ ಮಾಡಿದ್ದೂ ಪ್ರಮುಖ ಕಾರಣಗಳಲ್ಲಿ ಒಂದು. ಪಕ್ಷದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಯಕರ್ತರ ಆಗು ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲಿಲ್ಲ. ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು. ಹತ್ತು ಕೆಜಿ ಅಕ್ಕಿ ಗ್ಯಾರಂಟಿಯೂ ನನ್ನ ಸೋಲಿಗೆ ಕಾರಣವಾಗಿ ಎಂದು ಹೇಳಿದರು.